Search


ಜಿಕೆವಿಕೆಯಲ್ಲಿ ಬಿಝಡ್ ಕಪ್ ಕ್ರಿಕೆಟ್ ಟೂರ್ನಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ

ಬೆಂಗಳೂರು: ಸುದ್ದಿಯ ಒತ್ತಡ, ನಿರಂತರ ಕೆಲಸದ ನಡುವೆ ಮಾಧ್ಯಮ ಮಿತ್ರರಿಗೆ ಕ್ರೀಡಾಸ್ಫೂರ್ತಿಯ ಸಂಭ್ರಮ ನೀಡುವ ಉದ್ದೇಶದಿಂದ ಬೆಂಗಳೂರಿನ ಜಿಕೆವಿಕೆ ಮೈದಾನದಲ್ಲಿ ಆಯೋಜಿಸಲಾಗಿರುವ ಬಿಝಡ್ ಕಪ್ ಮೀಡಿಯಾ ಕ್ರಿಕೆಟ್ ಟೂರ್ನಿಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದರು.

9 ಡ್ರೀಮ್ಸ್ ಸಂಸ್ಥೆ ಆಯೋಜಿಸಿರುವ ಎರಡು ದಿನಗಳ ಈ ಕ್ರಿಕೆಟ್ ಟೂರ್ನಿಯಲ್ಲಿ 12 ತಂಡಗಳು ಹಾಗೂ 180ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದಾರೆ. ಮಾಧ್ಯಮ ಮಿತ್ರರು, ಪೊಲೀಸ್ ಅಧಿಕಾರಿಗಳು, ಸೆಲೆಬ್ರಿಟಿಗಳು ಹಾಗೂ ಜನಪ್ರತಿನಿಧಿಗಳ ಆಪ್ತ ಸಹಾಯಕರು ಒಂದೇ ಮೈದಾನದಲ್ಲಿ ಕ್ರಿಕೆಟ್ ಕಣಕ್ಕಿಳಿದು ಗಮನ ಸೆಳೆದಿದ್ದಾರೆ.

ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಆಟದಲ್ಲಿ ಸೋಲು-ಗೆಲುವು ಸಹಜ. ಆದರೆ ಪ್ರತಿಯೊಬ್ಬರೂ ಕ್ರೀಡಾಸ್ಫೂರ್ತಿಯಿಂದ ಆಡಬೇಕು ಎಂದು ಕರೆ ನೀಡಿದರು. ಬಿಡುವಿಲ್ಲದ ವೃತ್ತಿಜೀವನ ಮತ್ತು ಕೆಲಸದ ಒತ್ತಡದ ನಡುವೆ ಮಾಧ್ಯಮ ಮಿತ್ರರನ್ನು ಒಂದೇ ಕ್ರಿಕೆಟ್ ಮೈದಾನದಲ್ಲಿ ಒಗ್ಗೂಡಿಸುವುದು ಟೂರ್ನಿಯ ಪ್ರಮುಖ ಉದ್ದೇಶವಾಗಿದೆ. ಕ್ರಿಕೆಟ್ ಕೇವಲ ಸ್ಪರ್ಧೆಯಾಗಿರದೆ, ಸ್ನೇಹ, ಸೌಹಾರ್ದತೆ ಮತ್ತು ಕ್ರೀಡಾಸ್ಫೂರ್ತಿಯನ್ನು ಬೆಸೆಯುವ ವೇದಿಕೆಯಾಗಿದ್ದು, ಈ ಟೂರ್ನಿ ಅದಕ್ಕೆ ಸಾಕ್ಷಿಯಾಗಿದೆ.

ಟೂರ್ನಿಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮೀ ನಾರಾಯಣ್, ಆರ್‌ಸಿಪಿಎಲ್‌ನ ಸಾರ್ವಜನಿಕ ಸಂವಹನ ಪ್ರತಿನಿಧಿ ಅರ್ನಾಬ್ ದತ್ತಾ, ಝೆನ್‌ಹೊರಾ ಕಾರ್ಪೋರೇಷನ್ ಸಂಸ್ಥಾಪಕ ಎನ್. ಹರಿಪ್ರಸಾದ್, 9 ಡ್ರೀಮ್ಸ್ ಸಂಸ್ಥೆಯ ಮುಖ್ಯಸ್ಥ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಟೂರ್ನಿಯ ಮೊದಲ ದಿನವಾದ ಸೆಪ್ಟೆಂಬರ್ 5ರಂದು ಲೀಗ್ ಪಂದ್ಯಗಳು ನಡೆದಿದ್ದು, ಎರಡನೇ ದಿನವಾದ ಸೆಪ್ಟೆಂಬರ್ 6ರಂದು ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಎರಡು ದಿನಗಳ ಈ ಕ್ರಿಕೆಟ್ ಸಮರದಲ್ಲಿ ಗೆಲುವಿಗಾಗಿ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಮೈದಾನದಲ್ಲಿ ಸಿಕ್ಸರ್‌ಗಳ ಸದ್ದು, ವಿಕೆಟ್‌ಗಳ ಸಂಭ್ರಮ, ರೋಚಕ ಕ್ಷಣಗಳು ಹಾಗೂ ಕ್ರೀಡಾಸ್ಫೂರ್ತಿಯ ಕಳೆ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಕಣಕ್ಕಿಳಿದಿರುವ 12 ತಂಡಗಳು:

ದೇವ್ ಬ್ಯಾಟ್ಲರ್ಸ್

ವಿನಿಶಾ ವಾರಿಯರ್ಸ್

ಅರವಿಂದ್ ಅವೆಂಜರ್ಸ್

ಟೀಮ್ ಪರ್ವಂ

ಬಿಝಡ್ ವಾರಿಯರ್ಸ್

ಬಿಎಸ್ ಬುಲ್ಸ್

ಟೀಮ್ ಅಪ್ಪು

ಅರುಣ್ ವಿನಯ ಸ್ಟ್ರೈಕರ್ಸ್

ನಂದಿ ಬ್ಲಾಸ್ಟರ್ಸ್

ಪ್ರತಿಧ್ವನಿ ಚಾಲೆಂಜರ್ಸ್

ಡಿವೈನ್ ವಂಡರ್ ವಾರಿಯರ್ಸ್

ಪ್ರೋ ವಿನ್ ಪ್ರೈಡ್ಸ್

ಒಟ್ಟಿನಲ್ಲಿ ಪ್ರತಿದಿನ ಸುದ್ದಿಗಳನ್ನು ಜನರಿಗೆ ತಲುಪಿಸುವ ಮಾಧ್ಯಮ ಮಿತ್ರರು ಇದೀಗ ಬ್ಯಾಟ್ ಮತ್ತು ಚೆಂಡು ಹಿಡಿದು ಕ್ರಿಕೆಟ್ ಮೈದಾನದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಯಾರ ಬ್ಯಾಟ್ ಮಿಂಚಲಿದೆ? ಯಾರ ಬೌಲಿಂಗ್ ಸದ್ದು ಮಾಡಲಿದೆ? ಬಿಝಡ್ ಕಪ್ ಚಾಂಪಿಯನ್ ಪಟ್ಟ ಯಾರ ಪಾಲಾಗಲಿದೆ? ರನ್ನರ್‌ ಅಪ್ ಯಾರು?

By Ravikumar - 06-09-2026


Ads in Post