ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ನೀಡಿದ್ದ ಎನ್ನಲಾದ ಎಚ್ಚರಿಕೆ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಮಸೀದಿ ಮುಂದೆ ಪಟಾಕಿ ಸಿಡಿಸಿದರೆ ‘ಗ್ರಹಚಾರ ಬಿಡಿಸುತ್ತೇನೆ’ ಎಂದು ಇನ್ಸ್ಪೆಕ್ಟರ್ ಹೇಳಿದ್ದಾಗಿ ಆರೋಪಿಸಲಾಗಿದ್ದು, ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಇನ್ಸ್ಪೆಕ್ಟರ್ ಮತ್ತೆ ಅಂತಹ ರೀತಿಯಲ್ಲಿ ಮಾತನಾಡಿದರೆ ಪೊಲೀಸ್ ಠಾಣೆಗೆ ನುಗ್ಗುವುದಾಗಿ ಎಚ್ಚರಿಕೆ ನೀಡಿದ್ದರು.
ಪ್ರತಾಪ್ ಸಿಂಹ ಅವರ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ಪೊಲೀಸ್ ಠಾಣೆಗೆ ನುಗ್ಗಿದರೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು. ಇದೀಗ ಈ ವಿವಾದಕ್ಕೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ ಕೂಡ ಎಂಟ್ರಿ ಕೊಟ್ಟಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರತಾಪ್ ಸಿಂಹ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ಮೈಸೂರಿನ ಗಲ್ಲಿ ರೌಡಿ ಒಬ್ಬ ಪೊಲೀಸ್ ಠಾಣೆಗೆ ನುಗ್ಗುತ್ತೇನೆ ಎಂದು ಧಮ್ಕಿ ಹಾಕಿದ್ದಾನೆ. ನುಗ್ಗಿ ತೋರಿಸು, ನಾನು ನಿನ್ನನ್ನು ಚಾಲೆಂಜ್ ಮಾಡ್ತೀನಿ. ನಿನಗೆ ಪರಪ್ಪನ ಅಗ್ರಹಾರ ಗ್ಯಾರಂಟಿ. ತಾಕತ್ತಿದ್ದರೆ ಟ್ರೈ ಮಾಡು ಮಗ, ಆಲ್ ದಿ ಬೆಸ್ಟ್ ರಣಹೇಡಿ’ ಎಂದು ಪ್ರದೀಪ್ ಈಶ್ವರ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಟಿ. ನರಸೀಪುರ ಗಣೇಶೋತ್ಸವ ವಿವಾದ ರಾಜಕೀಯ ನಾಯಕರ ನಡುವಿನ ವಾಕ್ಸಮರಕ್ಕೂ ವೇದಿಕೆಯಾಗಿದೆ.