Search


ಹಂಗಾಮಿ ಸ್ಪೀಕರ್ ಆಗಿ ಶಾಸಕ ಟಿ.ಬಿ ಜಯಚಂದ್ರ ಆಯ್ಕೆ; ಇದೆ 13ರಿಂದ ಅಧಿವೇಶನ ಆರಂಭ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ ಆಗಸ್ಟ್ 13ರಿಂದ ಆರಂಭವಾಗಲಿದೆ. ಆಗಸ್ಟ್ 27ರವರೆಗೆ ಅಧಿವೇಶನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮಹತ್ವದ ರಾಜಕೀಯ ಚಟುವಟಿಕೆಗಳು ನಡೆಯುವ ನಿರೀಕ್ಷೆಯಿದೆ. ಸಚಿವ ಯು. ಟಿ ಖಾದರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಪೀಕರ್ ಸ್ಥಾನಕ್ಕೆ ಹಂಗಾಮಿ ಸಭಾಪತಿಯಾಗಿ ಶಿರಾ ಶಾಸಕ ಟಿಬಿ ಜಯಚಂದ್ರ ಆಯ್ಕೆಯಾಗಿದ್ದಾರೆ.

ಹಿರಿಯ ಕಾಂಗ್ರೆಸ್ ಶಾಸಕ ಟಿ.ಬಿ. ಜಯಚಂದ್ರ ಅವರನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆಗಸ್ಟ್ 3ರಿಂದ ಜಾರಿಗೆ ಬರುವಂತೆ ಜಯಚಂದ್ರ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ. ವಿಧಾನಸಭೆಯು ಖಾಯಂ ಸ್ಪೀಕರ್ ಆಯ್ಕೆ ಮಾಡುವವರೆಗೆ ಅವರು ಸ್ಪೀಕರ್ ಕರ್ತವ್ಯ ನಿರ್ವಹಿಸಲಿದ್ದಾರೆ.

ವಿಧಾನಸಭೆಯ ಸ್ಪೀಕರ್ ಹಾಗೂ ಡೆಪ್ಯುಟಿ ಸ್ಪೀಕರ್ ಸ್ಥಾನಗಳು ಖಾಲಿಯಾಗಿದ್ದ ಹಿನ್ನೆಲೆಯಲ್ಲಿ ಈ ನೇಮಕ ನಡೆದಿದೆ. ಹಿಂದಿನ ಸ್ಪೀಕರ್ ಯು.ಟಿ. ಖಾದರ್ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಬಳಿಕ ಸ್ಪೀಕರ್ ಸ್ಥಾನ ತೆರವಾಗಿತ್ತು. ಡೆಪ್ಯುಟಿ ಸ್ಪೀಕರ್ ಆಗಿದ್ದ ಆರ್.ಎಂ. ಲಮಾಣಿ ಕೂಡ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಎರಡೂ ಸ್ಥಾನಗಳು ಖಾಲಿಯಾಗಿದ್ದವು.

ಇದೀಗ ನಡೆಯಲಿರುವ ಅಧಿವೇಶನದಲ್ಲಿ ನೂತನ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಆಯ್ಕೆ ಪ್ರಮುಖ ವಿಷಯವಾಗಲಿದೆ. ಕಾಂಗ್ರೆಸ್ ಹೈಕಮಾಂಡ್ ಜಿ.ಎಸ್. ಪಾಟೀಲ್ ಅವರನ್ನು ಸ್ಪೀಕರ್ ಹಾಗೂ ಎ.ಎಸ್. ಪೊನ್ನಣ್ಣ ಅವರನ್ನು ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಪರಿಗಣಿಸಿದೆ ಎಂದು ವರದಿಯಾಗಿದೆ. ಅಧಿವೇಶನದ ವೇಳೆ ಸರ್ಕಾರದ ಆಡಳಿತ, ವಿವಿಧ ಇಲಾಖೆಗಳ ವಿಚಾರಗಳು ಹಾಗೂ ಪ್ರತಿಪಕ್ಷಗಳ ಪ್ರಶ್ನೆಗಳು ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆಯಿದೆ.

By thebigbulletin.com - 10-08-2026


Ads in Post