ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ ಸಂದರ್ಭದಲ್ಲಿ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ CCB ಅಧಿಕಾರಿಗಳು ದಿಢೀರ್ ದಾಳಿ ಹಾಗೂ ತಪಾಸಣೆ ನಡೆಸಿದ ವೇಳೆ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಕೀಪ್ಯಾಡ್ ಮೊಬೈಲ್ ಪತ್ತೆಯಾಗಿದೆ ಎನ್ನಲಾಗಿದೆ. ಜೈಲಿನೊಳಗೆ ನಿಷೇಧಿತ ಮೊಬೈಲ್ ಫೋನ್ ಹೇಗೆ ಪ್ರವೇಶಿಸಿತು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಜೈಲಿನ ಭದ್ರತಾ ವ್ಯವಸ್ಥೆ ಮತ್ತು ಕೈದಿಗಳಿಗೆ ನಿಷೇಧಿತ ವಸ್ತುಗಳು ಹೇಗೆ ತಲುಪುತ್ತಿವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಮೊಬೈಲ್ ಬಳಕೆ ಹಾಗೂ ಅದನ್ನು ಜೈಲಿನೊಳಗೆ ತಂದಿರುವ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ವರದಿಯಾಗಿದೆ. ಮೊಬೈಲ್ ಯಾರಿಂದ ಪೂರೈಕೆಯಾಯಿತು, ಅದನ್ನು ಪ್ರಜ್ವಲ್ ರೇವಣ್ಣ ಅವರು ಯಾವ ಉದ್ದೇಶಕ್ಕೆ ಬಳಸುತ್ತಿದ್ದರು ಎಂಬ ಅಂಶಗಳ ಬಗ್ಗೆಯೂ ತನಿಖೆ ಮುಂದುವರಿಯುವ ಸಾಧ್ಯತೆ ಇದೆ. ಇದೀಗ ಜೈಲಿನೊಳಗೆ ಮೊಬೈಲ್ ಪತ್ತೆಯಾಗಿರುವ ಘಟನೆ ಮತ್ತೊಮ್ಮೆ ಪರಪ್ಪನ ಅಗ್ರಹಾರ ಕಾರಾಗೃಹದ ಭದ್ರತಾ ವ್ಯವಸ್ಥೆಯತ್ತ ಗಮನ ಸೆಳೆದಿದೆ.