ನವದೆಹಲಿ: ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ 110ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಸಂಜೆ ದೆಹಲಿಯಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗಾಯಕ ಸಾಧು ಎಸ್. ತಿವಾರಿ ಅವರು ‘ಹನುಮಾನ್ ಅಂಶ್’ ಚಿತ್ರದ ಜನಪ್ರಿಯ ‘ಪಾರ್ವತಿ’ ಹಾಡನ್ನು ಹಾಡಿದರು. ಈ ವೇಳೆ ಪ್ರಧಾನಿ ಮೋದಿ ಕೂಡ ಹಾಡಿಗೆ ದನಿಗೂಡಿಸುವುದರ ಜೊತೆಗೆ ಕಂಜೀರಾ ನುಡಿಸಿ ತಾಳ ಹಾಕಿದ್ದು ವಿಶೇಷವಾಗಿತ್ತು.
‘ಹನುಮಾನ್ ಅಂಶ್’ ಚಿತ್ರದ ಮೂಲಕ ಗಮನ ಸೆಳೆದಿರುವ ಸಾಧು ಎಸ್. ತಿವಾರಿ ಅವರೇ ‘ಪಾರ್ವತಿ’ ಹಾಡಿನ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ್ದಾರೆ. ಶಿವ ಮತ್ತು ಪಾರ್ವತಿ ದೇವಿಯ ಕಥೆಯನ್ನು ಸರಳ ಭಾಷೆ ಹಾಗೂ ದೇಸಿ ಸಂಗೀತ ಶೈಲಿಯಲ್ಲಿ ಕಟ್ಟಿಕೊಟ್ಟಿರುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಿದೆ. ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ತಿವಾರಿ ಹೇಳಿದ್ದಾರೆ.
ಇನ್ನು ‘ಹನುಮಾನ್ ಅಂಶ್’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯೂ ಗಮನ ಸೆಳೆದಿದೆ. ಸ್ಯಾಕ್ನಿಲ್ಕ್ ಅಂಕಿಅಂಶಗಳ ಪ್ರಕಾರ, ಚಿತ್ರವು ಭಾರತದಲ್ಲಿ ಇದುವರೆಗೆ 291.53 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ. ಭಾರತದ ಒಟ್ಟು ಗಳಿಕೆ 344.35 ಕೋಟಿ ರೂ. ಆಗಿದ್ದು, ವಿದೇಶಗಳಲ್ಲಿ 37 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಚಿತ್ರದ ಜಾಗತಿಕ ಒಟ್ಟು ಗಳಿಕೆ 381.35 ಕೋಟಿ ರೂ. ತಲುಪಿದೆ. 50 ದಿನಗಳ ಬಳಿಕವೂ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮುಂದುವರಿದಿದೆ.