ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ವೇಳೆ ಅವಾಚ್ಯ ಪದಗಳನ್ನು ಬಳಸಿದ್ದ ಅಪ್ರಾಪ್ತ ಬಾಲಕಿಯನ್ನು ಕ್ಷಮಿಸುವ ಮೂಲಕ ಪ್ರಧಾನಿ ಮೋದಿ ಆಕೆಗೆ ಹೊಸ ಜೀವನ ನೀಡಿದ್ದಾರೆ ಎಂದು ಬಾಲಕಿಯ ತಾಯಿ ಭಾವುಕವಾಗಿ ಹೇಳಿದ್ದಾರೆ. ಪ್ರತಿಭಟನೆಯ ವೇಳೆ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದ ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಬಾಲಕಿ ಪ್ರಧಾನಿ ಮೋದಿಯವರಲ್ಲಿ ಕ್ಷಮೆಯಾಚಿಸಿ, ಇತರರ ಪ್ರಭಾವಕ್ಕೆ ಒಳಗಾಗಿ ಈ ರೀತಿ ಮಾತನಾಡಿದ್ದಾಗಿ ಹೇಳಿದ್ದಳು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಾಲಕಿಯ ತಾಯಿ, “ನನ್ನ ಮಗಳನ್ನು ಕ್ಷಮಿಸುವ ಮೂಲಕ ಮೋದಿ ಅವರು ದೊಡ್ಡತನ ತೋರಿಸಿದ್ದಾರೆ. ಅವರಿಗೆ ಕೈಮುಗಿದು ಧನ್ಯವಾದ ಹೇಳುತ್ತೇನೆ. ನನ್ನ ಮಗಳಿಗೆ ಹೊಸ ಜನ್ಮ ಸಿಕ್ಕಂತಾಗಿದೆ. ಅವರು ನೀಡಿರುವ ಅತಿದೊಡ್ಡ ಉಡುಗೊರೆ ಜೀವನದಾನ” ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಮಗಳ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕೈಬಿಡುವಂತೆ ಪ್ರಧಾನಿ ಮೋದಿಗೆ ಅವರು ಮನವಿ ಮಾಡಿದ್ದಾರೆ. ಪ್ರಕರಣದಲ್ಲಿ ಮಗಳ ಹೆಸರು ಮತ್ತು ವಯಸ್ಸು ತಪ್ಪಾಗಿ ನಮೂದಿಸಲಾಗಿದೆ ಎಂದು ತಾಯಿ ಆರೋಪಿಸಿದ್ದಾರೆ.
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬೇಡ
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ Instagram ಮತ್ತು Facebook ಬಳಕೆಯನ್ನು ನಿರ್ಬಂಧಿಸುವಂತೆ ಪ್ರಧಾನಿ ಮೋದಿಗೆ ಬಾಲಕಿಯ ತಾಯಿ ಮನವಿ ಮಾಡಿದ್ದಾರೆ.ಮಕ್ಕಳು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಸುಲಭವಾಗಿ ಒಳಗಾಗಬಹುದು. ಪ್ರತಿಭಟನೆಗಳಂತಹ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ಯಬಾರದು. ಅವರು ಶಿಕ್ಷಣದತ್ತ ಹೆಚ್ಚು ಗಮನಹರಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ, ಪ್ರತಿಭಟನೆ ವೇಳೆ ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಅವಾಚ್ಯ ಭಾಷೆ ಬಳಸಿದ ಯುವಕರನ್ನು ಕ್ಷಮಿಸುವುದಾಗಿ ಹೇಳಿದ್ದರು. ತಪ್ಪು ಮಾಡಿದ ಯುವಕರನ್ನು ಶಿಕ್ಷಿಸುವುದಕ್ಕಿಂತ ಅವರಿಗೆ ಸರಿಯಾದ ದಾರಿ ತೋರಿಸುವುದು ಮುಖ್ಯ ಎಂದು ಮೋದಿ ತಿಳಿಸಿದ್ದರು.