Search


ಸತತ 25 ವರ್ಷಗಳ ಆಡಳಿತದ ಮೈಲಿಗಲ್ಲು; ಶ್ರೀ ವಿನಾಯಕನಿಗೆ ಮೋದಿ ವಿಶೇಷ ಪೂಜೆ

ನವದೆಹಲಿ: ಸತತ 25 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಸರೋಜಿನಿ ನಗರದಲ್ಲಿರುವ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪೂಜೆ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, ದೇಶದ ಜನರ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಗಣಪತಿಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ವಿಘ್ನಹರ್ತನಾದ ಗಣೇಶನ ಆಶೀರ್ವಾದ ಸದಾ ದೇಶದ ಜನರ ಮೇಲಿರಲಿ ಹಾಗೂ ಭಾರತ ನಿರಂತರವಾಗಿ ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು. ಇದೇ ವೇಳೆ, ದೇಶದ ಸೇವೆಗೆ ತಮ್ಮನ್ನು ಇನ್ನಷ್ಟು ಸಮರ್ಪಿಸಿಕೊಳ್ಳುವ ಸಂಕಲ್ಪವನ್ನೂ ವ್ಯಕ್ತಪಡಿಸಿದರು.

2001ರ ಅಕ್ಟೋಬರ್ 7ರಂದು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ನರೇಂದ್ರ ಮೋದಿ ಅವರ ಸರ್ಕಾರದ ಮುಖ್ಯಸ್ಥರಾಗಿ ರಾಜಕೀಯ ಪಯಣ ಆರಂಭವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಸತತ 25 ವರ್ಷಗಳ ಕಾಲ ಆಡಳಿತ ನಡೆಸಿದ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ನಿರಂತರ ಹಾಗೂ ದೃಢ ನಾಯಕತ್ವವನ್ನು ಶ್ಲಾಘಿಸಿ ಕೇಂದ್ರ ಸಚಿವ ಸಂಪುಟ ಮಂಗಳವಾರ ವಿಶೇಷ ಅಭಿನಂದನಾ ನಿರ್ಣಯವನ್ನು ಅಂಗೀಕರಿಸಿತ್ತು.

By Ravikumar - 07-10-2026


Ads in Post