ನವದೆಹಲಿ : ಫೈದುಬೈ ವಿಮಾನ ಹೈಜಾಕ್ ಪ್ರಯತ್ನವನ್ನು ವಿಫಲಗೊಳಿಸಿ 174 ಪ್ರಯಾಣಿಕರ ಜೀವ ರಕ್ಷಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಛಾರ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನದಲ್ಲಿ ಹೆಚ್ಚಿನವರು ಇಸ್ರೇಲಿ ಪ್ರಯಾಣಿಕರಾಗಿದ್ದು, ದುಬೈನಿಂದ ಇಸ್ರೇಲ್ಗೆ ತೆರಳುತ್ತಿದ್ದ ವೇಳೆ ಹೈಜಾಕ್ ಮಾಡಿ ವಿಮಾನವನ್ನು ಪತನಗೊಳಿಸುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ.
ಈ ವೇಳೆ ಕ್ಯಾಪ್ಟನ್ ಸ್ಮಿತ್ ಅವರ ಮೇಲೆ ಭೀಕರ ದಾಳಿ ನಡೆದಿದ್ದರೂ, ತಮ್ಮ ಪ್ರಾಣದ ಹಂಗು ತೊರೆದು ಸಮಯೋಚಿತವಾಗಿ ನಿರ್ಧಾರ ಕೈಗೊಂಡು ಪ್ರಯಾಣಿಕರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಾಯಗೊಂಡಿರುವ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಪ್ಟನ್ ಸ್ಮಿತ್ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ಸ್ಮಿತ್ ಅವರ ಧೈರ್ಯ, ಸಾಹಸ ಮತ್ತು ಸಮಯೋಚಿತ ನಿರ್ಧಾರವನ್ನು ಪ್ರಧಾನಿ ಮೋದಿ ಮೆಚ್ಚಿಕೊಂಡಿದ್ದಾರೆ. ಅವರ ಧೈರ್ಯದ ನಡೆ ಇಡೀ ದೇಶ ಹೆಮ್ಮೆಪಡುವಂತೆ ಮಾಡಿದೆ ಎಂದು ಮೋದಿ ಹೇಳಿದ್ದಾರೆ. ಅಲ್ಲದೆ, ಕ್ಯಾಪ್ಟನ್ ಸ್ಮಿತ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ದೇಶದ ಜನರು ಹಾರೈಸುತ್ತಿದ್ದಾರೆ ಎಂದಿದ್ದಾರೆ.
‘ಮೋದಿ ನನ್ನ ಆದರ್ಶ ವ್ಯಕ್ತಿ’
ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ ಕ್ಯಾಪ್ಟನ್ ಸ್ಮಿತ್, ಮೋದಿ ತಮ್ಮ ಆದರ್ಶ ವ್ಯಕ್ತಿ ಎಂದು ಹೇಳಿದ್ದಾರೆ. ಪ್ರಧಾನಿಯೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿರುವುದು ತಮ್ಮ ಪಾಲಿಗೆ ಅತ್ಯಂತ ವಿಶೇಷ ಹಾಗೂ ಹೆಮ್ಮೆಯ ಕ್ಷಣ ಎಂದು ಸ್ಮಿತ್ ಭಾವುಕರಾಗಿ ತಿಳಿಸಿದ್ದಾರೆ.
‘ಇತರರ ಜೀವ ಉಳಿಸಲು ಭಾರತೀಯರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ’
ಕ್ಯಾಪ್ಟನ್ ಸ್ಮಿತ್ ಅವರ ಸಾಹಸವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಭಾರತೀಯರು ಯಾರ ಜೀವ ತೆಗೆಯಲು ಮುಂದಾಗುವವರಲ್ಲ, ಬದಲಾಗಿ ಅಗತ್ಯ ಬಂದಾಗ ಇತರರ ಜೀವ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವವರು ಎಂಬ ಹೆಮ್ಮೆ ನಮ್ಮಲ್ಲಿದೆ ಎಂದು ಮೋದಿ ಹೇಳಿದ್ದಾರೆ. ಪ್ರಧಾನಿಯ ಮಾತುಗಳನ್ನು ಕೇಳಿ ಕ್ಯಾಪ್ಟನ್ ಸ್ಮಿತ್ ಭಾವುಕರಾಗಿದ್ದಾರೆ. ವಿಮಾನದಲ್ಲಿನ ದಾಳಿಯ ಬಳಿಕ ತೀವ್ರ ನೋವು ಹಾಗೂ ಸಂಕಷ್ಟ ಎದುರಾದ ಸಂದರ್ಭದಲ್ಲಿ ತಾವು ಹನುಮಾನ್ ಚಾಲೀಸ ಪಠಿಸುತ್ತಿದ್ದೆ ಎಂದು ಕ್ಯಾಪ್ಟನ್ ಸ್ಮಿತ್ ಹೇಳಿದ್ದಾರೆ. ಕಷ್ಟದ ಸಮಯದಲ್ಲಿ ಹನುಮಾನ್ ಚಾಲೀಸ ಪಠಣ ತಮ್ಮ ಧೈರ್ಯವನ್ನು ಮತ್ತಷ್ಟು ಹೆಚ್ಚಿಸಿತು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಅವರು ಕ್ಯಾಪ್ಟನ್ ಸ್ಮಿತ್ ಅವರ ತಾಯಿ ಗೀತಾ ಬೆನ್ ಅವರೊಂದಿಗೂ ಮಾತನಾಡಿದ್ದಾರೆ. ತಮ್ಮ ಮಗನನ್ನು ಭಗವದ್ಗೀತೆಯ ಮೌಲ್ಯಗಳು ಮತ್ತು ಬೋಧನೆಗಳನ್ನು ತಿಳಿಸಿ ಬೆಳೆಸಿರುವುದಾಗಿ ಅವರು ಪ್ರಧಾನಿಗೆ ತಿಳಿಸಿದ್ದಾರೆ. ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವ ಅವಕಾಶ ಸಿಗುತ್ತದೆ ಎಂದು ತಾವು ಎಂದಿಗೂ ಊಹಿಸಿರಲಿಲ್ಲ. ಪ್ರಧಾನಿಯ ಕರೆ ಸ್ವೀಕರಿಸಿ ಮಾತನಾಡಿರುವುದು ತಮ್ಮ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣ ಎಂದು ಗೀತಾ ಬೆನ್ ಹೇಳಿದ್ದಾರೆ.