ನವದೆಹಲಿ: ಭಾರತ-ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲಪಡಿಸಲು ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಅತ್ಯಂತ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರಿಗೆ ತಿಳಿಸಿದ್ದಾರೆ. ಬ್ರಿಕ್ಸ್ ಶೃಂಗಸಭೆಯ ನಡುವಿನ ಉಭಯ ನಾಯಕರ ಭೇಟಿಯಲ್ಲಿ, ಗಡಿ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ ಜಾರಿಯಲ್ಲಿರುವ ಒಪ್ಪಂದಗಳು ಮತ್ತು ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಮೋದಿ ಒತ್ತಿ ಹೇಳಿದರು. ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳು ಯಾವುದೇ ಕಾರಣಕ್ಕೂ ವಿವಾದಗಳಾಗಿ ಪರಿವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಅಭಿಪ್ರಾಯವನ್ನು ನಾಯಕರು ವ್ಯಕ್ತಪಡಿಸಿದರು.
ಭಾರತ-ಚೀನಾ ಸಂಬಂಧವನ್ನು ಕಾರ್ಯತಂತ್ರದ ಹಾಗೂ ದೀರ್ಘಕಾಲೀನ ದೃಷ್ಟಿಕೋನದಿಂದ ಮುನ್ನಡೆಸುವ ಅಗತ್ಯವಿದೆ ಎಂದು ಮೋದಿ ಮತ್ತು ಷಿ ಜಿನ್ಪಿಂಗ್ ಹೇಳಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ ವ್ಯಾಪಾರ ಅಸಮತೋಲನ, ಪೂರೈಕೆ ಸರಪಳಿ ಸೇರಿದಂತೆ ಪರಸ್ಪರ ಕಳವಳಗಳಿಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ಎರಡೂ ದೇಶಗಳ ನಡುವೆ ಅರ್ಥಪೂರ್ಣ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ನಾಯಕರು ಚರ್ಚಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಅದೇ ರೀತಿ, ಗಡಿ ವಿವಾದಕ್ಕೆ ನ್ಯಾಯಯುತ, ಸಮಂಜಸ ಹಾಗೂ ಎರಡೂ ದೇಶಗಳಿಗೆ ಸ್ವೀಕಾರಾರ್ಹವಾದ ಪರಿಹಾರ ಕಂಡುಕೊಳ್ಳುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದ್ದಾರೆ. ಭಾರತ-ಚೀನಾ ಸಂಬಂಧವನ್ನು ಮುಂದುವರಿಸುವಾಗ ‘ಪರಸ್ಪರ ಗೌರವ, ಪರಸ್ಪರ ಸಂವೇದನೆ ಮತ್ತು ಪರಸ್ಪರ ಹಿತಾಸಕ್ತಿ’ ಎಂಬ ಮೂರು ತತ್ವಗಳು ಮಾರ್ಗದರ್ಶಕವಾಗಿರಬೇಕು ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ