ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ನಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದ್ದು, ಫ್ಲೋರಿಡಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಡಿಸೆಂಬರ್ 14 ಮತ್ತು 15ರಂದು ನಡೆಯಲಿರುವ ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆತಿಥ್ಯ ವಹಿಸಲಿದ್ದಾರೆ. ಮೋದಿ ಅವರ ಅಮೆರಿಕ ಪ್ರವಾಸದ ಕುರಿತು ಕೇಂದ್ರ ಸರ್ಕಾರದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಒಳಗೊಂಡ ಕ್ವಾಡ್ ನಾಯಕರ ಸಭೆಯನ್ನೂ ನಡೆಸುವ ಸಾಧ್ಯತೆ ಇದೆ. ಈ ಸಭೆ ನಡೆದರೆ ಮೋದಿ ಅವರು ಕ್ವಾಡ್ ಶೃಂಗಸಭೆಯಲ್ಲೂ ಭಾಗವಹಿಸಲಿದ್ದಾರೆ. ಜತೆಗೆ, ಮೋದಿ ಮತ್ತು ಟ್ರಂಪ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆಯೂ ಇದೆ ಎಂದು ವರದಿಗಳು ತಿಳಿಸಿವೆ. ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು ಸೆಪ್ಟೆಂಬರ್ನಲ್ಲಿ ಮೋದಿ ಅವರು ಜಿ-20 ಸಂದರ್ಭದಲ್ಲಿ ಅಮೆರಿಕಕ್ಕೆ ಬರಲಿದ್ದಾರೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದರು.
ಮೋದಿ ಅವರ ಅಮೆರಿಕ ಪ್ರವಾಸದ ಬಳಿಕ ಕೆನಡಾಕ್ಕೂ ಭೇಟಿ ನೀಡುವ ಸಾಧ್ಯತೆಯಿದೆ ಎಂಬ ವರದಿಗಳಿವೆ. ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು 2026ರಲ್ಲಿ ಕೆನಡಾಕ್ಕೆ ಭೇಟಿ ನೀಡುವಂತೆ ಮೋದಿ ಅವರಿಗೆ ಆಹ್ವಾನ ನೀಡಿರುವುದನ್ನು ಉಭಯ ದೇಶಗಳು ಈ ಹಿಂದೆ ದೃಢಪಡಿಸಿದ್ದವು.
ಮೋದಿ-ಟ್ರಂಪ್ ದ್ವಿಪಕ್ಷೀಯ ಮಾತುಕತೆ ನಡೆದರೆ ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳು, ರಷ್ಯಾದಿಂದ ಭಾರತದ ತೈಲ ಆಮದು ಮತ್ತು ಅದಕ್ಕೆ ಸಂಬಂಧಿಸಿದ ಅಮೆರಿಕದ ಪ್ರಸ್ತಾವಿತ ಶೇ.100ರವರೆಗಿನ ಸುಂಕ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕದ ಹೊಸ ನಿರ್ಬಂಧ ಮಸೂದೆ ಮತ್ತು ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳ ವಿಚಾರಗಳು ಎರಡೂ ದೇಶಗಳ ನಡುವೆ ಪ್ರಮುಖ ಚರ್ಚೆಯ ವಿಷಯವಾಗಿವೆ.