Search


ಮಹದೇವಪ್ಪ ಅವರ ಹೆಸರನ್ನು ಅಪ್ಪನೇ ಸೂಚಿಸಿದ್ದರು,ಆದರೆ ಹೈಕಮಾಂಡ್ ಕೈ ಬಿಟ್ಟಿತು ಎಂದ ಯತೀಂದ್ರ

ರಾಜ್ಯದಲ್ಲಿ ಸಚಿವ ಸಂಪುಟ ಕಗ್ಗಂಟು ಮುಂದುವರಿದಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಲ ಶಾಸಕರು ಕಾಂಗ್ರೆಸ್ ಹೈಕಮಾಂಡ್ ಮೇಲೆ ಮುನಿಸಿಕೊಂಡಿದ್ದು. ಮಾಜಿ ಸಿಎಂ ಸಿದ್ದರಾಮಯ್ಯರಿಂದಲೂ ಸಚಿವ ಸ್ಥಾನ ದೊರೆತಿಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಸಿದ್ದರಾಮಯ್ಯರ ಸುಪುತ್ರ ಯತೀಂದ್ರ ಸಿದ್ದರಾಮಯ್ಯ ಈ ಕುರಿತು ಪ್ರತಿಕ್ರಿಯೆ ನೀಡಿದ್ದು. 'ಮಹದೇವಪ್ಪ, ತನ್ವಿರ್ ಸೇಠ್ ಸೇರಿದಂತೆ ಹಲವರ ಹೆಸರನ್ನು ಅಪ್ಪನೇ ಸೂಚಿಸಿದ್ದರು, ಆದರೂ ಸಚಿವ ಸ್ಥಾನ ಕೈತಪ್ಪಿತು" ಎಂದು ಹೇಳಿದ್ದಾರೆ.

ಮೈಸೂರುದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಶಿಫಾರಸು ಮಾಡಿದ ಪಟ್ಟಿಯಲ್ಲಿ ಹಿರಿಯ ನಾಯಕ ಡಾ. ಎಚ್.ಸಿ. ಮಹದೇವಪ್ಪ ಅವರ ಹೆಸರೂ ಇತ್ತು ಎಂದು ತಿಳಿಸಿದರು. ಆದರೆ ಅಂತಿಮ ನಿರ್ಧಾರದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂದರು.

ತಮಗೆ ಸಚಿವ ಸ್ಥಾನ ಸಿಕ್ಕಿರುವ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಕುರುಬ ಸಮುದಾಯದಲ್ಲಿ ಅಸಮಾಧಾನ ಉಂಟಾಗಿತ್ತು. ಆ ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಿ ಪಕ್ಷದ ವರಿಷ್ಠರು ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿದ್ದಾರೆ ಎಂದು ಹೇಳಿದರು.

ಮಹದೇವಪ್ಪ, ತನ್ವೀರ್ ಸೇಠ್ ಸೇರಿದಂತೆ ಸಚಿವ ಸ್ಥಾನ ವಂಚಿತರಾಗಿರುವ ಹಿರಿಯ ನಾಯಕರ ಅಸಮಾಧಾನ ಸಹಜ. ಅವರೊಂದಿಗೆ ಹೈಕಮಾಂಡ್ ಈಗಾಗಲೇ ಮಾತುಕತೆ ನಡೆಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಯಲಿದೆ ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ, ಕಾಂಗ್ರೆಸ್‌ನಲ್ಲಿ ಯಾವುದೇ ಗಂಭೀರ ಭಿನ್ನಮತ ಇಲ್ಲ ಎಂದು ಸ್ಪಷ್ಟಪಡಿಸಿದರು.

By Ravikumar - 06-08-2026


Ads in Post