Search


ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

"ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ಜಾಗತಿಕ ನಗರವಾಗಿ ಗುರುತಿಸಿಕೊಂಡಿದೆ.ಸರ್ಕಾರಗಳು ಬೆಂಗಳೂರಿಗೆ ಸಮರ್ಪಕ ಯೋಜನೆ ರೂಪಿಸಿ  ನಿರ್ವಹಿಸಿದರೆ ಜನದಟ್ಟಣೆ,ಸಂಚಾರ ದಟ್ಟಣೆ ಹಾಗೂ ನಗರದ ಮೇಲಿನ ಒತ್ತಡವನ್ನು ಕಡಿಮೆ‌ ಮಾಡಬಹುದು" ಎಂದು ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಸದಸ್ಯರು ಡಾ.ಗಾ.ನಂ.ಶ್ರೀಕಂಠಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ನಾಡಪ್ರಭು ಕೆಂಪೇಗೌಡ ಮಾನವಿಕ ಮತ್ತು ಸಮಾಜವಿಜ್ಞಾನಗಳ ಕೇಂದ್ರ ಮತ್ತು ಅರ್ಥಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು." ಇತಿಹಾಸ ಪುರಷರ ಸ್ಮರಣೆಯಿಂದ ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ಸಿಗುತ್ತದೆ. ಬೆಂಗಳೂರು ಜ್ಞಾನ,ಆರೋಗ್ಯ, ಮಾಹಿತಿ ತಂತ್ರಜ್ಞಾನ, ಉದ್ಯೋಗ ಅವಕಾಶಗಳ ಕೇಂದ್ರವಾಗಿದ್ದು ದೇಶದ ಮೂಲೆಮೂಲೆಯಿಂದ ಜನರು ಕೆಲಸ ಅರಸಿ ಬರುತ್ತಿದ್ದಾರೆ.ಈ ಬೆಳವಣಿಗೆ ಕೆಂಪೇಗೌಡರ ದೂರದೃಷ್ಟಿ‌ ಪ್ರಮುಖ ಕಾರಣವಾಗಿದೆ. ಕೆಂಪೇಗೌಡರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ವೈಜ್ಞಾನಿಕ ಚಿಂತನೆ, ಸಾಮಾಜಿಕ ಸಾಮರಸ್ಯ, ಪರಿಸರ ಕಾಳಜಿ ಮತ್ತು ಅಭಿವೃದ್ಧಿಯ ಮನೋಭಾವದೊಂದಿಗೆ ಎಲ್ಲರೂ ಮುಂದುವರಿದರೆ, ಬೆಂಗಳೂರು ಇನ್ನಷ್ಟು ಸಮೃದ್ಧ, ಸುಂದರ ಮತ್ತು ವಿಶ್ವಕ್ಕೆ ಮಾದರಿ ನಗರವಾಗಿ ಬೆಳೆಯಲಿದೆ" ಎಂದು ಆಶಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ‌ ಕುಲಪತಿ ಡಾ.ಜಯಕರ ಎಸ್.ಎಂ ಮಾತನಾಡಿ "ಮಹಾನ್ ವ್ಯಕ್ತಿಗಳು ಆಯಾ ಕಾಲಕ್ಕೆ ಸೀಮಿತವಾಗದೆ ಶತಮಾನಗಳಿಗೆ ದಾರಿದೀಪವಾಗಿರುತ್ತಾರೆ. ನಾಡಪ್ರಭು ಕೆಂಪೇಗೌಡರ ಆದರ್ಶ, ದೂರದೃಷ್ಟಿ, ಸಮಾಜಮುಖಿ ಚಿಂತನೆ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಲಸಚಿವರು ಕೆ.ಟಿ.ಶಾಂತಲಾ, ಕುಲಸಚಿವರು (ಮೌಲ್ಯಮಾಪನ) ಪ್ರೊ.ಸಿ.ಎಸ್.ಕರಿಗಾರ್,ನಾಡಪ್ರಭು ಕೆಂಪೇಗೌಡ ಅಧ್ಯಯನ ಕೇಂದ್ರ ನಿರ್ದೇಶಕರು ಡಾ.ಪುಟ್ಟಸ್ವಾಮಯ್ಯ, ಸಿಂಡಿಕೇಟ್ ಸದಸ್ಯರು ಗಂಗರಾಜು,ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರು ಡಾ.ಬಸವರಾಜ ಬೆಣ್ಣಿ, ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರು ಡಾ.ಕೃಷ್ಣ ಉಪಸ್ಥಿತರಿದ್ದರು

By Ravikumar - 01-07-2026


Ads in Post