ದೇವಸ್ಥಾನದಿಂದ ಶಿಕ್ಷಣ ಸಂಸ್ಥೆಗಳವರೆಗೆ ನೆರವು... ನೆನಪಾಗಿ ಉಳಿದ ಸೇವೆ
ಉಡುಪಿ: ಬಾಲಿವುಡ್ನ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಮುಂಡ್ಕೂರಿನ ಜನರಲ್ಲಿ ನೋವು ಮೂಡಿಸಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನೊಂದಿಗೆ ನಾನಾ ಪಾಟೇಕರ್ ಹೊಂದಿದ್ದ ಆತ್ಮೀಯ ನಂಟು ಇದೀಗ ಮತ್ತೆ ನೆನಪಾಗಿದೆ.
ಸುಮಾರು 25 ವರ್ಷಗಳ ಹಿಂದೆ ಮುಂಡ್ಕೂರಿಗೆ ಭೇಟಿ ನೀಡುತ್ತಿದ್ದ ನಾನಾ ಪಾಟೇಕರ್, ಇಲ್ಲಿನ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ನೆರವು ನೀಡಿದ್ದರು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಕ್ಕೂ ಅವರು ದೇಣಿಗೆ ನೀಡಿದ್ದರು.
ನಾನಾ ಪಾಟೇಕರ್ ಅವರ ನೆರವಿನಿಂದ ನಿರ್ಮಾಣಗೊಂಡ ನಾನಾ ಪಾಟೇಕರ್ ಸಭಾಗೃಹ, ಇಂದು ಕೂಡ ಅವರ ಸೇವೆಯ ನೆನಪನ್ನು ಉಳಿಸಿಕೊಂಡಿದೆ. ಕೋಟಿ ರೂಪಾಯಿ ಮೌಲ್ಯದ ಈ ಸಭಾಗೃಹ ಮುಂಡ್ಕೂರಿನ ಪ್ರಮುಖ ನೆನಪುಗಳಲ್ಲಿ ಒಂದಾಗಿದೆ.
ಗುರುಪ್ರಸಾದ್ ಸುಧಾಕರ ಶೆಟ್ಟಿ ಜೊತೆ ಆತ್ಮೀಯ ಸ್ನೇಹ
ಮುಲ್ಲಡ್ಕದ ಗುರುಪ್ರಸಾದ್ ಸುಧಾಕರ ಶೆಟ್ಟಿ ಅವರೊಂದಿಗೆ ಆತ್ಮೀಯ ಸ್ನೇಹ ಹೊಂದಿದ್ದ ನಾನಾ ಪಾಟೇಕರ್, ಮುಂಡ್ಕೂರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಮುಲ್ಲಡ್ಕ ಬ್ರಹ್ಮ ಬೈದರ್ಕಳ ಗರಡಿ ಹಾಗೂ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗೂ ಅವರು ನೆರವು ನೀಡಿದ್ದರು.
ಶಿಕ್ಷಣ ಕ್ಷೇತ್ರಕ್ಕೂ ಮಹತ್ವದ ಕೊಡುಗೆ
ಮುಂಡ್ಕೂರಿನ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60ನೇ ವರ್ಷದ ಸಂಭ್ರಮದಲ್ಲೂ ನಾನಾ ಪಾಟೇಕರ್ ಕೊಡುಗೆ ನೀಡಿದ್ದರು. ಮುಂಡ್ಕೂರಿನ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಗ್ರಂಥಾಲಯ ಹಾಗೂ ಕಂಪ್ಯೂಟರ್ ಕೊಠಡಿ ನಿರ್ಮಾಣಕ್ಕೂ ನೆರವು ನೀಡಿದ್ದ ಅವರು, ಕಂಪ್ಯೂಟರ್ಗಳನ್ನು ಸಹ ಕೊಡುಗೆಯಾಗಿ ನೀಡಿದ್ದರು.
ಇಷ್ಟೇ ಅಲ್ಲ, ಮುಂಡ್ಕೂರಿನಲ್ಲಿ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಆರಂಭಿಸಬೇಕು ಎಂಬ ಆಶಯವನ್ನೂ ನಾನಾ ಪಾಟೇಕರ್ ವ್ಯಕ್ತಪಡಿಸಿದ್ದರು.
ಹೀಗಾಗಿ, ಮುಂಡ್ಕೂರಿನ ಪಾಲಿಗೆ ಕರ್ಣನಂತಿದ್ದ ನಾನಾ ಪಾಟೇಕರ್ ಅವರ ಅಗಲಿಕೆ ಸ್ಥಳೀಯರಲ್ಲಿ ನೋವು ಮೂಡಿಸಿದೆ. ಆದರೆ ಅವರು ನೀಡಿದ ನೆರವು, ಸಾಮಾಜಿಕ ಕಾಳಜಿ ಹಾಗೂ ಮುಂಡ್ಕೂರಿನೊಂದಿಗೆ ಬೆಸೆದುಕೊಂಡಿದ್ದ ಆತ್ಮೀಯ ಸಂಬಂಧ ಮಾತ್ರ ಸದಾ ನೆನಪಿನಲ್ಲಿ ಉಳಿಯಲಿದೆ.
ನಟನಾಗಿ ಪರದೆಯ ಮೇಲೆ ಅಚ್ಚಳಿಯದ ಛಾಪು... ಮುಂಡ್ಕೂರಿನ ಪಾಲಿಗೆ ಸಮಾಜ ಸೇವಕರಾಗಿ ಶಾಶ್ವತ ನೆನಪು — ನಾನಾ ಪಾಟೇಕರ್.