ಬೆಂಗಳೂರು: ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಎದುರಾಗಿದೆ. ಪ್ರತಿ ಲೀಟರ್ ಹಾಲಿನ ದರವನ್ನು ₹8ರಿಂದ ₹10ರವರೆಗೆ ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ರಾಜ್ಯ ಸರ್ಕಾರ ಹಾಗೂ ಕೆಎಂಎಫ್ಗೆ ಪ್ರಸ್ತಾವನೆ ಸಲ್ಲಿಸಿವೆ. ರೈತರು ಹಾಗೂ ಹಾಲು ಒಕ್ಕೂಟಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ದರ ಹೆಚ್ಚಳ ಅಗತ್ಯ ಎಂದು ಒಕ್ಕೂಟಗಳು ಪ್ರತಿಪಾದಿಸಿವೆ.
ಬಮೂಲ್ ರಾಮನಗರ ಕ್ಷೇತ್ರದ ನಿರ್ದೇಶಕ ಪಿ. ನಾಗರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈನುಗಾರಿಕೆ ಕ್ಷೇತ್ರದಲ್ಲಿ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ನಂದಿನಿ ಹಾಲಿನ ದರವನ್ನು ತಕ್ಷಣವೇ ಕನಿಷ್ಠ ₹8ರಿಂದ ₹10ರವರೆಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ದರ ಹೆಚ್ಚಳದ ಬೇಡಿಕೆಯನ್ನು ಈಡೇರಿಸಲು ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರದಿಂದ ಸಕಾರಾತ್ಮಕ ನಿರ್ಧಾರ ಹೊರಬರದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ ಸೆಪ್ಟೆಂಬರ್ 22ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ಸಿದ್ಧತೆ ನಡೆಸಿವೆ.
ದರ ಏರಿಕೆಗೆ ಒಕ್ಕೂಟಗಳ ಕಾರಣವೇನು?
ರಾಜ್ಯದ ಹಲವು ಭಾಗಗಳಲ್ಲಿ ಮೇವಿನ ಕೊರತೆ ಉಂಟಾಗಿರುವುದು ಹೈನುಗಾರರಿಗೆ ಸಮಸ್ಯೆಯಾಗಿದೆ. ಇದರ ಜೊತೆಗೆ ಪಶು ಆಹಾರ ಸೇರಿದಂತೆ ಹೈನುಗಾರಿಕೆಗೆ ಅಗತ್ಯವಿರುವ ವಿವಿಧ ವಸ್ತುಗಳ ಬೆಲೆ ಹೆಚ್ಚಾಗಿದೆ. ಹಸುಗಳ ಹಟ್ಟಿಯಲ್ಲಿ ಬಳಸುವ ರಬ್ಬರ್ ಮ್ಯಾಟ್ ಸೇರಿದಂತೆ ಹಲವು ಪರಿಕರಗಳ ವೆಚ್ಚವೂ ಏರಿಕೆಯಾಗಿದೆ ಎಂದು ಒಕ್ಕೂಟಗಳು ಹೇಳಿವೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆಯಿದೆ ಎಂಬುದು ಮತ್ತೊಂದು ಪ್ರಮುಖ ವಾದವಾಗಿದೆ. ಪ್ರಸ್ತುತ ದರದಲ್ಲಿ ಉತ್ಪಾದನಾ ವೆಚ್ಚ ನಿರ್ವಹಿಸುವುದು ಕಷ್ಟವಾಗಿದ್ದು, ಹೈನುಗಾರರಿಗೆ ನಷ್ಟ ಉಂಟಾಗುತ್ತಿದೆ ಎಂದು ಒಕ್ಕೂಟಗಳು ತಿಳಿಸಿವೆ.
ಆದರೆ ಹಾಲಿನ ದರ ಹೆಚ್ಚಳದ ಕುರಿತು ರಾಜ್ಯ ಸರ್ಕಾರದಿಂದ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಕೆಎಂಎಫ್ನ ಮನವಿ ಕುರಿತು ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವರು ಚರ್ಚಿಸಿದ ಬಳಿಕ ದರ ಏರಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ದರ ಏರಿಕೆಯಾದರೆ ಗ್ರಾಹಕರ ಮೇಲೂ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ.