Search


ನವರಾತ್ರಿ ಗರ್ಬಾ ನೃತ್ಯ ವಿವಾದ: ಮುಸ್ಲಿಮರ ಪ್ರವೇಶಕ್ಕೆ ವಿಎಚ್‌ಪಿ ವಿರೋಧ, ಅಮೃತಾ ಫಡ್ನವೀಸ್ ಭಿನ್ನಮತ

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬರುವ ನವರಾತ್ರಿ ಹಬ್ಬದ ಅಂಗವಾಗಿ ನಡೆಯಲಿರುವ ಗರ್ಬಾ ಹಾಗೂ ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರನ್ನು ಹೊರಗಿಡಬೇಕು ಎಂಬ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕರೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕ ನಿತೇಶ್ ರಾಣೆ ಈ ನಿಲುವನ್ನು ಬೆಂಬಲಿಸಿದರೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಹಾಗೂ ನಟ ಶ್ರೇಯಸ್ ತಲ್ಪಡೆ ಅವರು ಹಬ್ಬಗಳು ಎಲ್ಲರನ್ನೂ ಒಳಗೊಳ್ಳುವಂತಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಬ್ಬಗಳು ಜನರನ್ನು ಒಗ್ಗೂಡಿಸುವ ವೇದಿಕೆಯಾಗಬೇಕು ಎಂದು ಅಮೃತಾ ಫಡ್ನವೀಸ್ ಹೇಳಿದ್ದಾರೆ. ಮುಸ್ಲಿಂ ವ್ಯಕ್ತಿಯೊಬ್ಬರು ನಿಯಮಬದ್ಧವಾಗಿ ಗರ್ಬಾ ಅಥವಾ ದಾಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದರೆ ಅದರಲ್ಲಿ ತಪ್ಪೇನಿಲ್ಲ ಎಂದು ಅವರು ಹೇಳಿದ್ದು, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂಬ ನಿಲುವು ವ್ಯಕ್ತಪಡಿಸಿದ್ದಾರೆ.

ಇದಕ್ಕೆ ವಿರುದ್ಧವಾಗಿ ಬಿಜೆಪಿ ನಾಯಕ ನಿತೇಶ್ ರಾಣೆ ವಿಎಚ್‌ಪಿ ಕರೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮೂರ್ತಿ ಪೂಜೆಯನ್ನು ವಿರೋಧಿಸುವವರು ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಬಾರದು ಎಂದು ಅವರು ಹೇಳಿದ್ದಾರೆ. ಗರ್ಬಾ ಆವರಣ ಪ್ರವೇಶಿಸುವ ಮುನ್ನ ಗುರುತಿನ ಚೀಟಿ ಪರಿಶೀಲನೆ ನಡೆಸಬೇಕು ಹಾಗೂ ಹನುಮಾನ್ ಚಾಲೀಸಾ ಪಠಿಸುವಂತೆ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಹಬ್ಬದ ನೆಪದಲ್ಲಿ ‘ಲವ್ ಜಿಹಾದ್’ ಪ್ರಕರಣಗಳು ಹೆಚ್ಚಾಗುವುದನ್ನು ತಡೆಯಲು ಈ ಕ್ರಮ ಅಗತ್ಯ ಎಂದು ಅವರು ವಾದಿಸಿದ್ದಾರೆ.

ಇದೇ ವೇಳೆ, ನವರಾತ್ರಿ ಕೇವಲ ನೃತ್ಯ ಕಾರ್ಯಕ್ರಮವಲ್ಲ, ದುರ್ಗಾದೇವಿಯ ಆರಾಧನೆಯ ಹಬ್ಬ ಎಂದು ವಿಎಚ್‌ಪಿ ಹೇಳಿದೆ. ಸಂಘಟಕರು ಗರ್ಬಾ ಕಾರ್ಯಕ್ರಮಕ್ಕೆ ಬರುವವರ ಆಧಾರ್ ಕಾರ್ಡ್ ಪರಿಶೀಲಿಸಿ, ಹಣೆಗೆ ತಿಲಕ ಇಟ್ಟು ಪ್ರವೇಶ ನೀಡಬೇಕು ಎಂದು ವಿಎಚ್‌ಪಿ ಜಂಟಿ ಕಾರ್ಯದರ್ಶಿ ಶ್ರೀರಾಜ್ ನಾಯರ್ ಮಾರ್ಗಸೂಚಿ ನೀಡಿದ್ದಾರೆ. ಈ ಹೇಳಿಕೆಗಳ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಹಬ್ಬದ ಆಚರಣೆ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಸೌಹಾರ್ದದ ಕುರಿತು ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.

By Ravikumar - 09-09-2026


Ads in Post