Search


ತೋಳಿರುವ ಶರ್ಟ್‌ಗೆ ನಿಷೇಧ; NEET ಪರೀಕ್ಷೆಗೆ ಪೆನ್‌ ಕೂಡ ತರ್ಬೇಡಿ ಎಂದ NTA

ನವದೆಹಲಿ: ಭಾರೀ ವಿವಾದಕ್ಕೆ ಕಾರಣವಾಗಿದ್ದ ನೀಟ್‌-ಯುಜಿ(NEET UG 2026) ಮರು ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದೆ. ಮರುಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಧರಿಸುವ ಡ್ರೆಸ್ ಕೋಡ್ ಹಾಗೂ ಕೊಂಡೊಯ್ಯಬೇಕಾದ ವಸ್ತುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿಯಮ ಉಲ್ಲಂಘಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನಿಷೇಧಿಸಲಾಗುವುದು ಎಂದು ಕಠಿಣ ಆದೇಶ ಹೊರಡಿಸಿದೆ.

ಡ್ರೆಸ್‌ ಕೋಡ್‌ ಏನು...!

ನೀಟ್‌ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ತಿಳಿ ಬಣ್ಣದ ಬಟ್ಟೆ ಧರಿಸಬೇಕು ಎಂದು ಇಲಾಖೆ ಆದೇಶಿಸಿದ್ದು, ಉದ್ದನೆಯ ತೋಳಿನ ಶರ್ಟ್‌ಗಳಿಗೆ, ದೊಡ್ಡ ಬಟನ್‌, ದೊಡ್ಡ ಜೇಬು ಇರುವ ಬಟ್ಟೆಗಳಿಗೆ ನಿಷೇಧ ಹೇರಲಾಗಿದೆ. ಜೊತಗೆ ಶೂಗೆ ಅನುಮತಿ ನಿರಾಕರಿಸಿದ್ದು, ಹೀಲ್ಸ್‌ ಇಲ್ಲದ ಚಪ್ಪಲಿ ಪರೀಕ್ಷಾ ಕೇಂದ್ರದ ಒಳಗೆ ಅನುಮತಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ವಸ್ತುಗಳನ್ನು ಇಡಲು ಯಾವುದೇ ಪ್ರತ್ಯೇಕ ಕೌಂಟರ್ ಅಥವಾ ಸುರಕ್ಷಿತ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ, ತಪಾಸಣೆ ವೇಳೆ ವಸ್ತುಗಳನ್ನು ವಶಕ್ಕೆ ಪಡೆದು ಪರೀಕ್ಷಾ ಕೇಂದ್ರದ ಹೊರಗೆ ಇಡುವಾಗ ಅದು ಕಳೆದುಹೋಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಬೇಡಿ ಎಂದು ಎನ್‌ಟಿಎ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸೂಚನೆ ನೀಡಿದೆ.

ಇನ್ನು  ಧಾರ್ಮಿಕ ಅಥವಾ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 1ರಿಂದ 2 ಗಂಟೆ ಮುಂಚಿತವಾಗಿ ತಲುಪಬೇಕು. ಇದರಿಂದ ಅವರ ತಪಾಸಣೆಯನ್ನು ಸುಲಭವಾಗಿ ಮಾಡಬಹುದು ಎಂದು ಇಲಾಖೆ ಹೇಳಿದೆ.

ಪರೀಕ್ಷಾ ಕೇಂದ್ರಕ್ಕೆ ಏನು ತರಬೇಕು?:

ಪ್ರವೇಶ ಪತ್ರ (Admit Card): ಎನ್‌ಟಿಎ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿದ ಅಡ್ಮಿಟ್ ಕಾರ್ಡ್‌ನ ಸ್ಪಷ್ಟ ಪ್ರಿಂಟ್‌ಔಟ್ (ಅದರಲ್ಲಿ ಪಾಸ್‌ಪೋರ್ಟ್ ಅಳತೆಯ ಫೋಟೋ ಅಂಟಿಸಿರಬೇಕು ಮತ್ತು ಪೋಷಕರ ಸಹಿ ಇರಬೇಕು).

ಗುರುತಿನ ಚೀಟಿ (ID Proof): ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಅಥವಾ ಪಾಸ್‌ಪೋರ್ಟ್‌ನಂತಹ ಸರ್ಕಾರದ ಅಧಿಕೃತ ಅಸಲಿ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು.

ಪಾರದರ್ಶಕ ನೀರಿನ ಬಾಟಲಿ: ಅಭ್ಯರ್ಥಿಗಳು ಪರೀಕ್ಷೆ ಬರೆಯುವಾಗ ನೀರು ಕುಡಿಯುವುದಿದ್ದರೆ ಕೇವಲ ಪಾರದರ್ಶಕವಾದ ನೀರಿನ ಬಾಟಲಿಯನ್ನು ಮಾತ್ರ ಒಳಗೆ ಕೊಂಡೊಯ್ಯಬಹುದು.

ಹೆಚ್ಚುವರಿ ಫೋಟೋಗಳು: ಅಟೆಂಡೆನ್ಸ್ ಶೀಟ್‌ನಲ್ಲಿ ಅಂಟಿಸಲು ಎಕ್ಸ್​ಟ್ರಾ ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ತರಬೇಕು.

ಈ ವಸ್ತುಗಳನ್ನ ತೆಗೆದುಕೊಂಡು ಹೋಗಬಾರದು...!

ಸ್ಟೇಷನರಿ ವಸ್ತುಗಳು: ಯಾವುದೇ ರೀತಿಯ ಜ್ಯಾಮಿಟ್ರಿ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಲಾಗ್ ಟೇಬಲ್, ರೈಟಿಂಗ್ ಪ್ಯಾಡ್, ಯಾವುದೇ ಕಾಗದದ ತುಣುಕುಗಳು ಅಥವಾ ಕೈಬರಹದ ಚೀಟಿಗಳನ್ನು ತರುವಂತಿಲ್ಲ. ಪರೀಕ್ಷೆಗೆ ಅಗತ್ಯವಿರುವ ಪೆನ್ನನ್ನು ಎನ್‌ಟಿಎ ವತಿಯಿಂದ ಪರೀಕ್ಷಾ ಕೇಂದ್ರದಲ್ಲೇ ನೀಡಲಾಗುತ್ತದೆ.

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು: ಮೊಬೈಲ್ ಫೋನ್‌ಗಳು, ಬ್ಲೂಟೂತ್ ಸಾಧನಗಳು, ಸ್ಮಾರ್ಟ್ ವಾಚ್‌ಗಳು, ಇಯರ್‌ಫೋನ್‌ಗಳು, ಪೇಜರ್ ಅಥವಾ ಯಾವುದೇ ರೀತಿಯ ಹೆಲ್ತ್ ಬ್ಯಾಂಡ್‌ಗಳು ಧರಿಸುವಂತಿಲ್ಲ, ಜೊತೆಗೆ ಪರ್ಸ್, ಸನ್ ಗ್ಲಾಸಸ್, ಹ್ಯಾಂಡ್‌ಬ್ಯಾಗ್‌, ಬೆಲ್ಟ್‌ಗಳು ಅಥವಾ ಕ್ಯಾಪ್‌ಗಳನ್ನು ತರುವಂತಿಲ್ಲ.

ಆಭರಣಗಳು: ಯಾವುದೇ ರೀತಿಯ ಚಿನ್ನ, ಬೆಳ್ಳಿ, ವಜ್ರದ ಆಭರಣಗಳು, ಉಂಗುರ, ಕಿವಿಯೋಲೆ, ಮೂಗುತಿ ಅಥವಾ ಸರಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.

ಪರೀಕ್ಷಾ ಕೇಂದ್ರದ ಸಮಯ ಮತ್ತು ಹಾಜರಾತಿ:

ಸಮಯ ಪಾಲನೆ: ಪರೀಕ್ಷೆಯು ಮಧ್ಯಾಹ್ನದ ಅವಧಿಯಲ್ಲಿ ನಡೆಯಲಿದ್ದು, ಪ್ರವೇಶ ಪತ್ರದಲ್ಲಿ (Admit Card) ನಮೂದಿಸಿರುವ ಸಮಯಕ್ಕೆ (Reporting Time) ವಿದ್ಯಾರ್ಥಿಗಳು ಹಾಜರಿರಬೇಕು.

ಗೇಟ್ ಮುಚ್ಚುವ ಸಮಯ: ಪರೀಕ್ಷೆ ಆರಂಭವಾಗುವ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರದ ಮುಖ್ಯ ಗೇಟ್‌ಗಳನ್ನು ಮುಚ್ಚಲಾಗುತ್ತದೆ. ತಡವಾಗಿ ಬರುವ ಯಾವುದೇ ವಿದ್ಯಾರ್ಥಿಗೆ ಪ್ರವೇಶ ನೀಡಲಾಗುವುದಿಲ್ಲ.

By Ravikumar - 21-06-2026


Ads in Post