ಹಾಸನ: 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಕ್ಕೂ ಹೆಚ್ಚು ಸಮಯ ಬಾಕಿ ಇರುವಾಗಲೇ ಹಾಸನ ಜಿಲ್ಲೆಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳು ಶುರುವಾಗಿದೆ. ಬಿಜೆಪಿ ಮಾಜಿ ಶಾಸಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಅವರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಳ್ಳುತ್ತಿರುವುದು ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಪ್ರೀತಂ ಗೌಡ ಮತ್ತು ಶ್ರೇಯಸ್ ಪಟೇಲ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಾತ್ರವಲ್ಲದೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಇಬ್ಬರ ನಡುವೆ ಆತ್ಮೀಯತೆ ಕಂಡುಬರುತ್ತಿದೆ. ಇದರಿಂದಾಗಿ ಪ್ರೀತಂ ಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಒಂದೇ ವೇದಿಕೆಯಲ್ಲಿ ನಾಯಕರು
ಹಾಸನದ ಪೆಂಡಾಲ್ ಗಣಪತಿ ವಿಸರ್ಜನೆ ಕಾರ್ಯಕ್ರಮ ಹಾಗೂ ಹೊಳೆನರಸೀಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶ್ರೇಯಸ್ ಪಟೇಲ್ ಮತ್ತು ಪ್ರೀತಂ ಗೌಡ ಒಂದೇ ವೇದಿಕೆ ಹಂಚಿಕೊಂಡಿದ್ದರು. ಮೆರವಣಿಗೆಯ ವೇಳೆ ಇಬ್ಬರೂ ನಾಯಕರು ಒಟ್ಟಿಗೆ ಕಾಣಿಸಿಕೊಂಡಿದ್ದು, ಬೆಂಬಲಿಗರು ಇಬ್ಬರನ್ನೂ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಇತ್ತೀಚೆಗೆ ಹಾಸನದ ಅಂಬೇಡ್ಕರ್ ಭವನದಲ್ಲಿ ನಡೆದ ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲೂ ಇಬ್ಬರು ನಾಯಕರು ಜೊತೆಯಾಗಿ ಕಾಣಿಸಿಕೊಂಡರು.
ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರು ಪ್ರೀತಂ ಗೌಡ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಪ್ರಶಂಸಿಸಿದರು. ಪಕ್ಷದ ಪ್ರಮುಖ ಸಭೆ ಇದ್ದರೂ ಪ್ರೀತಂ ಗೌಡ ಅವರ ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ಬಂದಿರುವುದಾಗಿ ಅವರು ಹೇಳಿದರು. ಒಂದು ಅವಧಿಗೆ ಶಾಸಕರಾಗಿದ್ದರೂ ಹಾಸನ ನಗರವನ್ನು ಸುಂದರವಾಗಿ ಹಾಗೂ ಸ್ವಚ್ಛವಾಗಿ ಅಭಿವೃದ್ಧಿಪಡಿಸುವ ಕೆಲಸವನ್ನು ಪ್ರೀತಂ ಗೌಡ ಮಾಡಿದ್ದಾರೆ ಎಂದು ಶ್ರೇಯಸ್ ಪಟೇಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಅವರು ಎಲ್ಲ ಸಮಾಜಗಳನ್ನೂ ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ, “ಪಕ್ಷ ಯಾವುದೇ ಇರಲಿ, ಒಬ್ಬ ಸಹೋದರನಾಗಿ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ” ಎಂದು ಶ್ರೇಯಸ್ ಪಟೇಲ್ ಶುಭ ಹಾರೈಸಿರುವುದು ಗಮನ ಸೆಳೆದಿದೆ. ಈ ಹೇಳಿಕೆ ಕೂಡ ಹಾಸನದ ರಾಜಕೀಯ ವಲಯದಲ್ಲಿ ಹಲವು ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಇದಕ್ಕೆ ಪ್ರತಿಯಾಗಿ ಪ್ರೀತಂ ಗೌಡ ಕೂಡ ಶ್ರೇಯಸ್ ಪಟೇಲ್ ಅವರನ್ನು ತಮ್ಮ ಸಹೋದರನಂತೆ ಉಲ್ಲೇಖಿಸಿ, ಅವರ ಮೇಲೆ ಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ. ದಲಿತ ಸಮುದಾಯದ ಹಕ್ಕುಗಳು ಮತ್ತು ಮೀಸಲಾತಿ ವಿಚಾರದಲ್ಲೂ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾಸನ ರಾಜಕೀಯದಲ್ಲಿ ಪ್ರೀತಂ ಗೌಡ ಅವರ ರಾಜಕೀಯ ನಿಲುವುಗಳು ಹಲವು ಬಾರಿ ಚರ್ಚೆಗೆ ಕಾರಣವಾಗಿವೆ. 2023ರ ವಿಧಾನಸಭಾ ಚುನಾವಣೆಯ ಬಳಿಕ ಅವರ ರಾಜಕೀಯ ಚಟುವಟಿಕೆಗಳು ಸ್ವಲ್ಪ ಮಟ್ಟಿಗೆ ಮೌನವಾಗಿದ್ದವು. 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಹಾಸನದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ರಾಜಕೀಯ ಲೆಕ್ಕಾಚಾರಗಳು ಕುತೂಹಲ ಮೂಡಿಸಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಜೊತೆಗಿನ ಪ್ರೀತಂ ಗೌಡ ಅವರ ಇತ್ತೀಚಿನ ಆತ್ಮೀಯತೆ ಮಹತ್ವ ಪಡೆದಿದೆ.