Search


ನೈಸ್ ಭೂಸ್ವಾಧೀನ ಪ್ರಕರಣ: ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ನೈಸ್ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ವಿವಾದದಲ್ಲಿ ಸಂಸ್ಥೆಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. 2025ರ ಜುಲೈ 4ರಂದು ಭೂಸ್ವಾಧೀನ ರದ್ದುಪಡಿಸಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ನೈಸ್ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡುವಂತೆ ಸಂಸ್ಥೆ ಮನವಿ ಮಾಡಿತ್ತು.

ವಿಚಾರಣೆ ವೇಳೆ ನೈಸ್ ಪರ ವಕೀಲರು, ಯೋಜನೆಯ ಶೇ.25ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಸುಮಾರು 1,100 ಎಕರೆ ಭೂಮಿಯನ್ನು ಬಳಸಿಕೊಳ್ಳಲಾಗಿದೆ. ರೈತರಿಗೆ ಪರಿಹಾರವನ್ನೂ ವಿತರಿಸಲಾಗಿದೆ ಎಂದು ವಾದಿಸಿದರು. ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು ಅಥವಾ ಕನಿಷ್ಠ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ರೈತರ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿ, ರೈತರಿಗೆ ಇದುವರೆಗೆ ನ್ಯಾಯಯುತ ಪರಿಹಾರ ದೊರೆತಿಲ್ಲ ಎಂದು ವಾದಿಸಿದರು. 23 ವರ್ಷಕ್ಕೂ ಹೆಚ್ಚು ಕಾಲ ರೈತರ ಭೂಮಿಯನ್ನು ಬಳಸಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ವ್ಯವಸ್ಥಿತ ಅಕ್ರಮಗಳು ನಡೆದಿವೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ರಾಜ್ಯ ಸರ್ಕಾರದ ಪರ ವಕೀಲರೂ ಪ್ರತ್ಯೇಕ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿ, ಅದನ್ನೂ ಪರಿಗಣಿಸುವಂತೆ ಮನವಿ ಮಾಡಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ಸಮಗ್ರ ವಿಚಾರಣೆ ನಡೆಸದೆ ಯಾವುದೇ ಮಧ್ಯಂತರ ತಡೆ ಅಥವಾ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ನೈಸ್ ಸಂಸ್ಥೆಯ ಮನವಿಗೆ ತಕ್ಷಣದ ಪರಿಹಾರ ನೀಡಲು ನಿರಾಕರಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ನವೆಂಬರ್ 2ಕ್ಕೆ ನಿಗದಿಪಡಿಸಿದೆ. ಅಂದು ಎಲ್ಲಾ ಅರ್ಜಿದಾರರ ವಾದಗಳನ್ನು ಆಲಿಸುವುದಾಗಿ ತಿಳಿಸಿದೆ.

By Ravikumar - 05-10-2026


Ads in Post