ನವದೆಹಲಿ: ದೇಶಾದ್ಯಂತ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಪೂರೈಕೆ ಕೊರತೆಯಿಂದ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟುವ ಆತಂಕ ಎದುರಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಗಟು ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಆಗಸ್ಟ್ 18ರ ವೇಳೆಗೆ ಈರುಳ್ಳಿಯ ಸರಾಸರಿ ಸಗಟು ಬೆಲೆ ಕ್ವಿಂಟಲ್ಗೆ ₹2,898ಕ್ಕೆ ತಲುಪಿದೆ. ಒಂದು ವಾರದ ಅವಧಿಯಲ್ಲಿ ಬೆಲೆ ಸುಮಾರು 32 ಪ್ರತಿಶತದಷ್ಟು ಏರಿಕೆಯಾಗಿದ್ದು, ಒಂದು ತಿಂಗಳಲ್ಲಿ ಶೇ.43ಕ್ಕೂ ಹೆಚ್ಚು ಹೆಚ್ಚಳವಾಗಿದೆ.
ರಬಿ ಹಂಗಾಮಿನ ಈರುಳ್ಳಿ ಉತ್ಪಾದನೆ ಕುಸಿತ, ಪ್ರಮುಖ ಉತ್ಪಾದನಾ ಪ್ರದೇಶಗಳಲ್ಲಿ ಅಕಾಲಿಕ ಮಳೆ ಸೇರಿದಂತೆ ಹಲವು ಕಾರಣಗಳಿಂದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿಯ ಲಭ್ಯತೆ ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.
ಆಂಧ್ರಪ್ರದೇಶದ ಕೆಲವು ಪ್ರದೇಶಗಳಲ್ಲಿಯೂ ಈರುಳ್ಳಿ ಬೆಲೆಯಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಂಡುಬಂದಿದೆ. ಜೂನ್ನಲ್ಲಿ ಕೆ.ಜಿ.ಗೆ ಸುಮಾರು ₹25ರಷ್ಟಿದ್ದ ಬೆಲೆ ಆಗಸ್ಟ್ನಲ್ಲಿ ₹60ರ ಮಟ್ಟಕ್ಕೆ ತಲುಪಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಈರುಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಖಾರಿಫ್ ಹಂಗಾಮಿನ ಹೊಸ ಬೆಳೆ ಮಾರುಕಟ್ಟೆಗೆ ಬರುವಲ್ಲಿ ವಿಳಂಬವಾದರೆ ಪೂರೈಕೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.
ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವೂ ಕ್ರಮ ಕೈಗೊಳ್ಳುತ್ತಿದೆ. ಈರುಳ್ಳಿ ಖರೀದಿ ಬೆಲೆಯನ್ನು ಕೆ.ಜಿಗೆ ₹26.45ಕ್ಕೆ ಹೆಚ್ಚಿಸಲಾಗಿದ್ದು, ಬಫರ್ ಸ್ಟಾಕ್ನಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಪೂರೈಕೆ ಹೆಚ್ಚಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈರುಳ್ಳಿ ಬೆಲೆ ಏರಿಕೆಯ ಪರಿಣಾಮ ಸಾಮಾನ್ಯ ಗ್ರಾಹಕರ ಅಡುಗೆ ಮನೆಯ ಖರ್ಚಿನ ಮೇಲೂ ಬೀಳುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಬೆಲೆ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದು ಕುತೂಹಲ ಮೂಡಿಸಿದೆ.