Search


ಕರೂರ್ ಕಾಲ್ತುಳಿತ ದುರಂತ ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವ ಆದೇಶ ರದ್ದು

ತಮಿಳುನಾಡಿನ ಕರುರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ಹೊರಡಿಸಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ. ಸಾರ್ವಜನಿಕ ಉದ್ಯೋಗಗಳನ್ನು ಪರಿಹಾರ ಅಥವಾ ಅನುಕಂಪದ ಹೆಸರಿನಲ್ಲಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. 

ನ್ಯಾಯಾಲಯದ ಪ್ರಕಾರ, ಸರ್ಕಾರಿ ಉದ್ಯೋಗ ನೀಡುವ ಪ್ರಕ್ರಿಯೆ ಸಂವಿಧಾನದ ಅನುಚ್ಛೇದ 14 (ಸಮಾನತೆ ಹಕ್ಕು) ಮತ್ತು ಅನುಚ್ಛೇದ 16 (ಸರ್ಕಾರಿ ಉದ್ಯೋಗದಲ್ಲಿ ಸಮಾನ ಅವಕಾಶ)ಗಳಿಗೆ ಅನುಗುಣವಾಗಿರಬೇಕು. ಕೇವಲ ಪರಿಹಾರ ಕ್ರಮವಾಗಿ ಉದ್ಯೋಗ ನೀಡುವುದು ಸಂವಿಧಾನಬದ್ಧವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 

ಕರುರ್‌ನಲ್ಲಿ 2025ರ ಸೆಪ್ಟೆಂಬರ್‌ನಲ್ಲಿ ಟಿವಿಕೆ (TVK) ಪಕ್ಷದ ರ್ಯಾಲಿಯ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರು. ಬಳಿಕ ರಾಜ್ಯ ಸರ್ಕಾರ ಮೃತರ ಕುಟುಂಬದ ಒಬ್ಬ ಅರ್ಹ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ನಿರ್ಧಾರ ಕೈಗೊಂಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಅಂತಿಮವಾಗಿ ಸರ್ಕಾರದ ಆದೇಶವನ್ನು ರದ್ದುಪಡಿಸಿದೆ. 

ಈ ತೀರ್ಪು ವಿಜಯ್ ಸರ್ಕಾರಕ್ಕೆ ಮಹತ್ವದ ಕಾನೂನು ಹಿನ್ನಡೆಯಾಗಿ ಪರಿಗಣಿಸಲಾಗಿದ್ದು, ಸಾರ್ವಜನಿಕ ಉದ್ಯೋಗ ಹಂಚಿಕೆಯಲ್ಲಿ ಸಂವಿಧಾನಾತ್ಮಕ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸಂದೇಶವನ್ನು ನ್ಯಾಯಾಲಯ ನೀಡಿದೆ. 

By Ravikumar - 28-07-2026


Ads in Post