ಇಸ್ಲಾಮಾಬಾದ್: ಆಪರೇಷನ್ ಸಿಂಧೂರ್ಗೆ ಸಂಬಂಧಿಸಿದಂತೆ ಪಾಕಿಸ್ತಾನದ ವಾಯುಪಡೆ ಬಿಡುಗಡೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ಗೆ ಗುರಿಯಾಗಿದೆ. ಭಾರತ–ಪಾಕಿಸ್ತಾನ ಸಂಘರ್ಷದಲ್ಲಿ ತಾವೇ ಮೇಲುಗೈ ಸಾಧಿಸಿದ್ದೇವೆ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಅದರಲ್ಲಿರುವ ಅತಿರಂಜಿತ ದೃಶ್ಯಗಳು ಮತ್ತು ಸಾಕ್ಷ್ಯರಹಿತ ಹೇಳಿಕೆಗಳು ಪಾಕಿಸ್ತಾನ ವಾಯುಪಡೆಗೆ ಮುಜುಗರ ಉಂಟುಮಾಡಿವೆ.
ಪಾಕಿಸ್ತಾನದ ವಾಯುಪಡೆಯ ದಿನಾಚರಣೆಯ ಅಂಗವಾಗಿ 'ಫಿಝಾವೋಂ ಕೆ ಪಾಸ್ಟಾನ್' ಎಂಬ ಶೀರ್ಷಿಕೆಯಡಿ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ವಿಡಿಯೋದಲ್ಲಿ ಭಾರತದ ಹಲವು ವಾಯುನೆಲೆಗಳನ್ನು ಧ್ವಂಸ ಮಾಡಿದ್ದೇವೆ, ಭಾರತದ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದ್ದೇವೆ ಎಂಬಂತಹ ಹೇಳಿಕೆಗಳನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ, ಭಾರತದ ಸಂಸತ್ತಿನ ಮೇಲೆಯೂ ದಾಳಿ ನಡೆಸಿರುವಂತೆ ಗ್ರಾಫಿಕ್ಸ್ ಮೂಲಕ ಚಿತ್ರಿಸಲಾಗಿದೆ. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಮತ್ತು ವ್ಯಂಗ್ಯಕ್ಕೆ ಕಾರಣವಾಗಿವೆ.
ವಿಡಿಯೋದಲ್ಲಿ ಭಾರತದ ಸುಮಾರು 32 ವಾಯುನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ವಾಯುಪಡೆ ಹೇಳಿಕೊಂಡಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಂದರ್ಭದಲ್ಲಿಯೂ ಜಮ್ಮುವಿನ ಆದಂಪುರ್ ವಾಯುನೆಲೆಯನ್ನು ಗುರಿಯಾಗಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿತ್ತು. ಆದರೆ, ಅದರ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಆದಂಪುರ್ ವಾಯುನೆಲೆಯಿಂದಲೇ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಹೊಸ ವಿಡಿಯೋದಲ್ಲಿನ ಹೇಳಿಕೆಗಳ ವಿಶ್ವಾಸಾರ್ಹತೆಯ ಮೇಲೂ ಪ್ರಶ್ನೆಗಳು ಎದ್ದಿವೆ.
ಭಾರತದ ಎರಡು S-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ನಾಶಪಡಿಸಿದ್ದೇವೆ ಎಂದೂ ವಿಡಿಯೋದಲ್ಲಿ ಪ್ರತಿಪಾದಿಸಲಾಗಿದೆ. ಆದರೆ, ಈ ಹೇಳಿಕೆಗೆ ಬೆಂಬಲವಾಗಿ ಯಾವುದೇ ಉಪಗ್ರಹ ಚಿತ್ರ, ದೃಶ್ಯ ಸಾಕ್ಷ್ಯ ಅಥವಾ ಅಧಿಕೃತ ದಾಖಲೆಗಳನ್ನು ನೀಡಲಾಗಿಲ್ಲ. ಬದಲಾಗಿ, ಗ್ರಾಫಿಕ್ಸ್ ಮತ್ತು ಆನಿಮೇಷನ್ಗಳನ್ನು ಬಳಸಿಕೊಂಡು ದಾಳಿಯ ದೃಶ್ಯಗಳನ್ನು ಸೃಷ್ಟಿಸಿರುವುದು ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನ ವಾಯುಪಡೆಯ ಮಾಧ್ಯಮ ವಿಭಾಗವೇ ಈ ವಿಡಿಯೋವನ್ನು ಹಂಚಿಕೊಂಡಿದೆ ಎಂದು ತಿಳಿದುಬಂದಿದೆ.
ಇದರ ಜೊತೆಗೆ ಭಾರತದ ಸ್ಯಾಟಿಲೈಟ್ ಸಿಗ್ನಲ್ಗಳನ್ನು ಜಾಮ್ ಮಾಡಲಾಗಿದೆ, ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಹಾಗೂ ಭಾರತದ ರಾಷ್ಟ್ರೀಯ ಪವರ್ ಗ್ರಿಡ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂಬಂತಹ ಹೇಳಿಕೆಗಳನ್ನೂ ವಿಡಿಯೋದಲ್ಲಿ ಮಾಡಲಾಗಿದೆ. ಗುಜರಾತಿನ ಕಾಂಡ್ಲಾ ಬಂದರು, ಐಎನ್ಎಸ್ ವಿಕ್ರಾಂತ್ ಸೇರಿದಂತೆ ಪ್ರಮುಖ ರಕ್ಷಣಾ ಕೇಂದ್ರಗಳು ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ನಡೆಸಿರುವಂತೆ ಕೂಡ ಚಿತ್ರಿಸಲಾಗಿದೆ. ಆದರೆ, ಈ ಎಲ್ಲಾ ಹೇಳಿಕೆಗಳಿಗೆ ಯಾವುದೇ ಸ್ಪಷ್ಟ ಸಾಕ್ಷ್ಯವನ್ನು ವಿಡಿಯೋದಲ್ಲಿ ಒದಗಿಸಲಾಗಿಲ್ಲ.
ವಿಡಿಯೋದ ಮತ್ತೊಂದು ದೃಶ್ಯದಲ್ಲಿ ಭಾರತದ ನಾಲ್ಕು ರಾಫೇಲ್, ಒಂದು ಸುಖೋಯ್-30 ಎಂಕೆಐ, ಒಂದು ಮಿಗ್-29, ಒಂದು ಮಿರಾಜ್-2000 ಯುದ್ಧವಿಮಾನ ಹಾಗೂ ಒಂದು ಹೆರಾನ್ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಗ್ರಾಫಿಕ್ಸ್ ಮೂಲಕ ತೋರಿಸಲಾಗಿದೆ. ಆದರೆ, ಯುದ್ಧವಿಮಾನಗಳು ಪತನಗೊಂಡಿದ್ದರೆ ಅದರ ಅವಶೇಷಗಳು ಅಥವಾ ವಾಯುನೆಲೆಗಳ ಮೇಲೆ ದಾಳಿ ನಡೆದಿದ್ದರೆ ರನ್ವೇ ಮತ್ತು ಹ್ಯಾಂಗರ್ಗಳಿಗೆ ಉಂಟಾದ ಹಾನಿಯ ಯಾವುದೇ ದೃಶ್ಯ ಸಾಕ್ಷ್ಯವನ್ನು ಪ್ರಕಟಿಸಿಲ್ಲ.
ಒಟ್ಟಾರೆ, ಆಪರೇಷನ್ ಸಿಂಧೂರ್ನಲ್ಲಿ ತಾವೇ ಮೇಲುಗೈ ಸಾಧಿಸಿದ್ದೇವೆ ಎಂಬ ಸಂದೇಶವನ್ನು ಪಾಕಿಸ್ತಾನದ ಜನರಿಗೆ ತಲುಪಿಸುವ ಉದ್ದೇಶದಿಂದ ಈ ವಿಡಿಯೋ ಸಿದ್ಧಪಡಿಸಲಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಆದರೆ, ಸಾಕ್ಷ್ಯಾಧಾರಗಳ ಬದಲಿಗೆ ಎಐ ಮತ್ತು ಆನಿಮೇಷನ್ ಗ್ರಾಫಿಕ್ಸ್ಗೆ ಹೆಚ್ಚಿನ ಆದ್ಯತೆ ನೀಡಿರುವುದು ಇದೀಗ ಪಾಕಿಸ್ತಾನದ ವಾಯುಪಡೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಗುರಿಮಾಡಿದೆ.