Search


ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪರಮೇಶ್ವರ್‌..!

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ (DK Shivakumar) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರೊಂದಿಗೆ ಡಾ.ಜಿ ಪರಮೇಶ್ವರ್‌ ಅವರು ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ 13 ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದರು. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪ್ರಮಾಣವಚನ ಬೋಧಿಸಿದರು. ಜಿ. ಪರಮೇಶ್ವರ್‌ ರಾಜ್ಯದ ಡಿಸಿಎಂ ಆಗಿ ಡಾ. ಬಿ.ಆರ್‌ ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಸಂಪುಟ ದರ್ಜೆ ಸಚಿವರಾಗಿ ಕೆ.ಹೆಚ್‌ ಮುನಿಯಪ್ಪ, ಕೆ.ಜೆ ಜಾರ್ಜ್‌, ಬೈರತಿ ಸುರೇಶ್‌, ಶರಣಪ್ರಕಾಶ್‌ ಪಾಟೀಲ್‌ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ರೆ, ಎಂ.ಬಿ ಪಾಟೀಲ್‌ ಅವರು ವಿಶ್ವಗುರು ಬಸವಣ್ಣ, ಬಸವಾದಿ ಶರಣರು, ಲಿಂಗೈಕ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಹೆಸರಿನಲ್ಲಿ ‌ಪ್ರಮಾಣ ವಚನ ಸ್ವೀಕಾರ ಮಾಡಿದ್ರು.

ಇನ್ನುಳಿದಂತೆ ರಾಮಲಿಂಗಾ ರೆಡ್ಡಿ, ಸತೀಶ್‌ ಜಾರಕಿಹೊಳಿ, ಕೃಷ್ಣಭೈರೇಗೌಡ, ಪ್ರಿಯಾಂಕ್‌ ಖರ್ಗೆ, ಯು.ಟಿ ಖಾದರ್‌, ಈಶ್ವರ್‌ ಖಂಡ್ರೆ, ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಶ್ರದ್ಧಾ ಪೂರ್ವಕವಾಗಿ ಪ್ರತಿಜ್ಞೆ ಸ್ವೀಕರಿಸಿದರು. ಶೀಘ್ರದಲ್ಲೇ ಎಲ್ಲಾ ಸಂಪುಟ ಸಚಿವರಿಗೆ ಖಾತೆ ನಿಗದಿ ಮಾಡಲಾಗುತ್ತದೆ.

ಇನ್ನು ಒಟ್ಟು 5ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಡಾ.ಜಿ.ಪರಮೇಶ್ವರ್, 1989ರಲ್ಲಿ ಮಧುಗಿರಿಯಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ರು. 1993ರಲ್ಲಿ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಸೇವೆ ಸಲ್ಲಿಸಿದ್ರು. 2010ರಿಂದ 2018ರವರೆಗೂ KPCC ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪರಮೇಶ್ವರ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ ಡಿಸಿಎಂ ಆಗಿದ್ದರು. ಜೊತೆಗೆ ಗೃಹ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ವಿಜ್ಞಾನ ತಂತ್ರಜ್ಞಾನ ಸಚಿವರಾಗಿ, ಬೆಂಗಳೂರು ಅಭಿವೃದ್ಧಿ ಸಚಿವರಾಗಿಯೂ ಪರಮೇಶ್ವರ್‌ ಸೇವೆ ಸಲ್ಲಿಸಿದ್ದಾರೆ.

By Ravikumar - 03-06-2026


Ads in Post