ಢಾಕಾ: ಬಾಂಗ್ಲಾದೇಶದ ಜೈಲಿನಲ್ಲಿ ಬಂಧಿಯಾಗಿರುವ ಹಿಂದೂ ಧಾರ್ಮಿಕ ಮುಖಂಡ ಚಿನ್ಮಯ್ ಕೃಷ್ಣ ದಾಸ್ ಅವರಿಗೆ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಟ್ಟೋಗ್ರಾಮ್ ಜಿಲ್ಲಾಡಳಿತ ಕೇವಲ ಐದು ಗಂಟೆಗಳ ತಾತ್ಕಾಲಿಕ ಪರೋಲ್ ಮಂಜೂರು ಮಾಡಿದೆ. ಅನಾರೋಗ್ಯದಿಂದ ಬಳಲುತ್ತಿದ್ದ 71 ವರ್ಷದ ತಾಯಿ ಸಂಧ್ಯಾ ರಾಣಿ ಧಾರ್ ಅವರನ್ನು ಅವರು ಜೀವಂತವಾಗಿದ್ದಾಗ ಭೇಟಿಯಾಗಲು ಸಾಧ್ಯವಾಗಿರಲಿಲ್ಲ.
ತಾಯಿ ಮೃತಪಟ್ಟ ಬಳಿಕ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಚಿನ್ಮಯ್ ಕೃಷ್ಣ ದಾಸ್ ಅವರಿಗೆ ಪರೋಲ್ ನೀಡಲಾಗಿದ್ದು, ಚಟ್ಟೋಗ್ರಾಮ್ನ ಪುಂಡರೀಕ್ ಧಾಮ್ನಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯಕ್ಕೆ ತೆರಳಿದ ಚಿನ್ಮಯ್ ದಾಸ್ ಅವರು ರಾಧಾ-ಕೃಷ್ಣನ ವಿಗ್ರಹದ ಪಾದಗಳನ್ನು ಸ್ಪರ್ಶಿಸಿ ಕಣ್ಣೀರಿಡುತ್ತಾ ಪ್ರಾರ್ಥಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಐದು ಗಂಟೆಗಳ ಬಳಿಕ ಅವರು ಮತ್ತೆ ಜೈಲಿಗೆ ಮರಳಿದ್ದಾರೆ.
ಚಿನ್ಮಯ್ ದಾಸ್ ಅವರ ಕುಟುಂಬದ ಪ್ರಕಾರ, ತಾಯಿ ಜೀವಂತವಾಗಿದ್ದಾಗ ಅವರನ್ನು ಭೇಟಿಯಾಗಲು ಷರತ್ತುಬದ್ಧ ಪರೋಲ್ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಅಸ್ವಸ್ಥ ಬಂಧುಗಳನ್ನು ಭೇಟಿ ಮಾಡಲು ಕೈದಿಗಳಿಗೆ ಪರೋಲ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಕಾರಣ ನೀಡಿ ಅರ್ಜಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು ಎಂದು ವರದಿಯಾಗಿದೆ. ಬಳಿಕ ತಾಯಿ ಮೃತಪಟ್ಟ ನಂತರ ಚಟ್ಟೋಗ್ರಾಮ್ ಜಿಲ್ಲಾಧಿಕಾರಿ ಮೊಹಮ್ಮದ್ ಝಾಹಿದುಲ್ ಇಸ್ಲಾಂ ಮಿಯಾ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಐದು ಗಂಟೆಗಳ ಪರೋಲ್ ಮಂಜೂರು ಮಾಡಿದರು.
ತಾಯಿಯ ದೀರ್ಘಕಾಲದ ಅನಾರೋಗ್ಯ, ಮಗನ ಜೈಲು ವಾಸ ಹಾಗೂ ಪದೇಪದೇ ಜಾಮೀನು ನಿರಾಕರಣೆಯಾಗುತ್ತಿದ್ದ ವಿಚಾರಗಳು ಸಂಧ್ಯಾ ರಾಣಿ ಅವರ ಮೇಲೆ ತೀವ್ರ ಮಾನಸಿಕ ಪರಿಣಾಮ ಬೀರಿದ್ದವು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಗ ಜೀವಂತವಾಗಿದ್ದಾಗ ಅವರನ್ನು ಒಮ್ಮೆ ನೋಡಬೇಕೆಂಬ ತಾಯಿಯ ಆಸೆ ಈಡೇರಲಿಲ್ಲ ಎಂದು ಚಿನ್ಮಯ್ ದಾಸ್ ಅವರ ಸಹೋದರರು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ ಜೋಟ್ ಸಂಘಟನೆಯ ಮುಖಂಡರಾಗಿರುವ ಚಿನ್ಮಯ್ ಕೃಷ್ಣ ದಾಸ್ ಅವರನ್ನು 2024ರ ನವೆಂಬರ್ನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದಡಿ ದೇಶದ್ರೋಹ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಹಾಗೂ ರಕ್ಷಣೆಗಾಗಿ ಅವರ ನೇತೃತ್ವದಲ್ಲಿ ಹಲವು ಪ್ರತಿಭಟನೆಗಳು ಮತ್ತು ರ್ಯಾಲಿಗಳು ನಡೆದಿದ್ದವು.
ಈ ಹಿಂದೆ ಇಸ್ಕಾನ್ನೊಂದಿಗೆ ಗುರುತಿಸಿಕೊಂಡಿದ್ದ ಚಿನ್ಮಯ್ ದಾಸ್ ವಿರುದ್ಧ ಒಟ್ಟು ಆರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಅವುಗಳಲ್ಲಿ ನಾಲ್ಕು ಪ್ರಕರಣಗಳಲ್ಲಿ ಹೈಕೋರ್ಟ್ ಜಾಮೀನು ನೀಡಿದ್ದರೂ, ಉಳಿದ ಪ್ರಕರಣಗಳ ಕಾರಣದಿಂದ ಅವರು ಜೈಲಿನಿಂದ ಬಿಡುಗಡೆಯಾಗಿಲ್ಲ. ದೇಶದ್ರೋಹ ಪ್ರಕರಣದ ಜಾಮೀನಿಗೆ ತಡೆ ಇದ್ದು, ಪ್ರತಿಭಟನೆ ವೇಳೆ ಸರ್ಕಾರಿ ಅಭಿಯೋಜಕ ಸೈಫುಲ್ ಇಸ್ಲಾಂ ಅಲಿಫ್ ಹತ್ಯೆಯಾದ ಪ್ರಕರಣದಲ್ಲಿಯೂ ಚಿನ್ಮಯ್ ದಾಸ್ ವಿರುದ್ಧ ಆರೋಪವಿದ್ದು, ಚಟ್ಟೋಗ್ರಾಮ್ ತ್ವರಿತ ವಿಚಾರಣಾ ನ್ಯಾಯಾಧಿಕರಣದಲ್ಲಿ ವಿಚಾರಣೆ ನಡೆಯುತ್ತಿದೆ.