ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯ ನಿವಾರಣ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಾಂತೀಯ ಕಚೇರಿಯ ಮೇಲೆ ಮಂಗಳವಾರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಸದ್ಯ ಈ ದಾಳಿಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದ್ದು. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮಂಗಳವಾರ ಮಧ್ಯರಾತ್ರಿ ಸುಮಾರು 12.36 ರ ವೇಳೆಗೆ ಈ ದಾಳಿ ನಡೆದಿದೆ. ಬುಧವಾರ ಮುಂಜಾನೆ ಆರ್ಎಸ್ಎಸ್ ಸ್ವಯಂಸೇವಕರು ಪ್ರಾರ್ಥನೆಗಾಗಿ ಸಭಾಂಗಣಕ್ಕೆ ಹೋದಾಗ ಅಲ್ಲಿ ಪೆಟ್ರೋಲ್ ತುಂಬಿದ್ದ ಬಾಟಲಿಗಳು ಪತ್ತೆಯಾಗಿವೆ. ಇದರಿಂದ ಅನುಮಾನಗೊಂಡು ಕಚೇರಿಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇಬ್ಬರು ಯುವಕರು ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆಯುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ದಾಳಿಯ ಸಮಯದಲ್ಲಿ ಕಚೇರಿಯಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿದ್ರಿಸುತ್ತಿದ್ದರು.
ಇನ್ನು ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಸಂಜಯ್ ಸೇಠ್ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ, ಜೊತೆಗೆ ಆರ್ಎಸ್ಎಸ್ ಕಾರ್ಯಕರ್ತರು ಆತಂಕದಿಂದ ಸ್ಥಳಕ್ಕೆ ಧಾವಿಸಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇನ್ನು ಈ ಕುರಿತು ಬಿಜೆಪಿ ನಾಯಕರು ಮಾತನಾಡಿದ್ದು "ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಯಾವುದೋ ದೊಡ್ಡ ಸಂಚಿಗೆ ಸಿದ್ಧತೆ ನಡೆದಂತೆ ಕಾಣುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆಯೇ ಸದರ್ ಡಿಎಸ್ಪಿ ನೇತೃತ್ವದ ಪೊಲೀಸ್ ಪಡೆ ಸ್ಥಳಕ್ಕೆ ಆಗಮಿಸಿ ಇಡೀ ಕಚೇರಿಯನ್ನು ಸುತ್ತುವರೆದಿದೆ. ವಿಧಿವಿಜ್ಞಾನ ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಕಚೇರಿಯ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ದಾಳಿಕೋರರ ಪತ್ತೆಗೆ ಜಾಲ ಬೀಸಿದ್ದಾರೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕೆಂದು ರಾಂಚಿ ಜಿಲ್ಲಾ ಆಡಳಿತ ಮನವಿ ಮಾಡಿದೆ.