Search


ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ..!

ಟೆಹ್ರಾನ್: ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರಧಾನ ನರೇಂದ್ರ ಮೋದಿಗೆ ಇರಾನ್‌ ಸರ್ಕಾರ ಆಹ್ವಾನ ನೀಡಿದೆ. ಮುಂದಿನ ತಿಂಗಳು ಅಂದರೆ ಜುಲೈ 9ರಂದು ಮಶ್ಹದ್‌ ನಗರದಲ್ಲಿ ಖಮೇನಿ ಅಂತ್ಯಕ್ರಿಯೆ ನಡೆಯಲಿದ್ದು. ವಿಶ್ವದ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಅಯತೊಲ್ಲಾ ಅಲಿ ಖಮೇನಿಯ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ (Masoud Pezeshkian) ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಆಹ್ವಾನಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಅಂತ್ಯಕ್ರಿಯೆಯನ್ನು ಸಂಘರ್ಷದಿಂದಾಗಿ ಮುಂದೂಡಲಾಗಿತ್ತು. ಇದೀಗ ಜುಲೈ 4ರಿಂದ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಲಿದ್ದು, ಇರಾನ್ ಸೇರಿದಂತೆ ವಿವಿಧ ನಗರಗಳಲ್ಲಿ ಬೃಹತ್ ಮೆರವಣಿಗೆ ನಡೆಯಲಿದೆ. ಈ ವೇಳೆ 1 ಕೋಟಿಗೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದೆ. 

ವರದಿಗಳ ಪ್ರಕಾರ, ಅಯತೊಲ್ಲಾ ಖಮೇನಿಯ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ತೆಹ್ರಾನ್‌ನ `ಗ್ರಾಂಡ್ ಮೊಸಲ್ಲಾ’ ಸಂಕೀರ್ಣದಲ್ಲಿ ಇರಿಸಲಾಗುವುದು. ಅಲ್ಲದೇ ತೆಹ್ರಾನ್ ಮತ್ತು ಕೋಮ್ ನಗರಗಳಲ್ಲಿ ಬೃಹತ್ ಮೆರವಣಿಗೆ ನಡೆಯಲಿದ್ದು, ಇದರೊಂದಿಗೆ ಇರಾಕ್‌ನ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾದಲ್ಲೂ ವಿಶೇಷ ಪ್ರಾರ್ಥನೆ ನಡೆಯಲಿದೆ.

ಜುಲೈ 9ರಂದು ಅಂತ್ಯಕ್ರಿಯೆ, 1 ಕೋಟಿ ಜನ ಭಾಗವಹಿಸುವ ನಿರೀಕ್ಷೆ..!

ಎಲ್ಲಾ ವಿಧಿ ವಿಧಾನಗಳ ನಂತರ ಜುಲೈ 9 ರಂದು ಖಮೇನಿಯ ತವರು  ಮಶ್ಹದ್‌ನಲ್ಲಿರುವ ಪ್ರಸಿದ್ಧ `ಇಮಾಮ್ ರೆಜಾ’ ಮಸೀದಿಯಲ್ಲಿ ಅಂತಿಮ ಪ್ರಕ್ರಿಯೆ ನೆರವೇರಲಿದೆ. ಸುಮಾರು ನಾಲ್ಕು ದಶಕಗಳ ಕಾಲ ಇರಾನ್‌ನ ರಾಜಕೀಯ ವ್ಯವಸ್ಥೆಯನ್ನು ಮುನ್ನಡೆಸಿದ್ದ ನಾಯಕನಿಗೆ ಅಂತಿಮ ವಿದಾಯ ಹೇಳಲು ಕೋಟ್ಯಂತರ ಜನರು ಆಗಮಿಸುವ ನಿರೀಕ್ಷೆಯಿದೆ. ಇದು 1989ರಲ್ಲಿ ಇರಾನ್‌ನ ಸಂಸ್ಥಾಪಕ ಅಯತೋಲ್ಲಾ ರುಹೊಲ್ಲಾ ಖೊಮೆನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾದ 1 ಕೋಟಿ ಜನರ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ಇರಾನ್ ಸರ್ಕಾರ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದೆ.

By Ravikumar - 24-06-2026


Ads in Post