Search


ಗೆದ್ದರು ಸೋತರು ಸುಮ್ಮನೆ ಇರ್ಬೇಕು ; ಫೈನಲ್ ಪಂದ್ಯಕ್ಕೂ ಮುನ್ನ ಪೊಲೀಸರಿಂದ ಖಡಕ್ ಎಚ್ಚರಿಕೆ

ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ ಮತ್ತು ನಗರ ಪೊಲೀಸ್ ಇಲಾಖೆಯು ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜೊತೆಗೆ ಪಂದ್ಯದಲ್ಲಿ ಅಂತಿಮ ಫಲಿತಾಂಶ ಬಂದ ನಂತರ ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆ ಮಾಡುವುದನ್ನ ನಿಷೇಧಿಸಿದ್ದಾರೆ.

ಮೆರವಣಿಗೆ, ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ಪೊಲೀಸ್ ಇಲಾಖೆ..!

ಈ ಕುರಿತು ವಿಶೇಷ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಪೊಲೀಸರು, ಪಂದ್ಯ ಫಲಿತಾಂಶದ ಬಳಿಕ ರಸ್ತೆಗಳಲ್ಲಿ ವಿಜಯೋತ್ಸವ, ಮೆರವಣಿಗೆ ಅಥವಾ ಸಂಭ್ರಮಾಚರಣೆಗೆ ಅವಕಾಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ನಗರಾದ್ಯಂತ ರಾತ್ರಿ ಪೂರ್ತಿ ಕುಡಿದು ವಾಹನ ಚಾಲನೆ (Drink and Drive) ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ.

ಇನ್ನು ಸಾರ್ವಜನಿಕ ರಸ್ತೆ ಅಥವಾ ಫುಟ್‌ಪಾತ್‌ಗಳಲ್ಲಿ ಗುಂಪುಗೂಡುವುದನ್ನ ಸಂಪೂರ್ಣವಾಗಿ ನಿಷೇಧಿಸಿದ್ದು. ಬೈಕ್ ರ್ಯಾಲಿ, ವೀಲಿಂಗ್, ರೇಸಿಂಗ್ ಹಾಗೂ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ತಡೆಯಲಾಗಿದೆ.ಅಷ್ಟೇ ಅಲ್ಲ್ದ ರಸ್ತೆಯಲ್ಲಿ ಅತಿಯಾಗಿ ಹಾರ್ನ್ ಮಾಡಿ ಜನರಿಗೆ ತೊಂದರೆ ಕೊಡುವವರ ಮೇಲೆ ದಂಡ ಪ್ರಯೋಗಕ್ಕೂ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.

LED ಮೂಲಕ ಮ್ಯಾಚ್ ಪ್ರದರ್ಶನಕ್ಕೆ ಬ್ರೇಕ್!

ಮಾಲ್‌ಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸಾರ್ವಜನಿಕ ರಸ್ತೆಗಳಿಗೆ ಮುಖಮಾಡಿ ದೊಡ್ಡ ಸ್ಕ್ರೀನ್ ಅಥವಾ ಎಲ್‌ಇಡಿ ಗೋಡೆಗಳ ಮೂಲಕ ಪಂದ್ಯವನ್ನು ಪ್ರದರ್ಶಿಸುವಂತಿಲ್ಲ. ಜೊತೆಗೆ ರಸ್ತೆ ಬದಿಯ ವಾಣಿಜ್ಯ ಎಲ್‌ಇಡಿ ಸ್ಕ್ರೀನ್‌ಗಳನ್ನು ಆಫ್ ಮಾಡಬೇಕು ಅಥವಾ ಮುಚ್ಚಬೇಕು. ಪೂರ್ವ ಅನುಮತಿ ಇಲ್ಲದೆ ಪ್ರದರ್ಶನ ನೀಡುವಂತಿಲ್ಲ ಎಂದು ಅದೇಶಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್‌ಗಳು, ದ್ವೇಷದ ಸಂದೇಶಗಳು ಅಥವಾ ಎದುರಾಳಿ ತಂಡದ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ನಿಂದಿಸುವುದನ್ನು ಮಾಡಬಾರದು ಎಂದು ಸೂಚಿಸಲಾಗಿದೆ. ಮೇಲಿನ ಯಾವುದೇ ನಿಯಮಗಳನ್ನ ಉಲ್ಲಂಘಿಸಿರುವುದು ಕಂಡು ಬಂದರೆ ಸಾರ್ವಜನಿಕರು 112 ಸಂಖ್ಯೆ ಕರೆ ಮಾಡಿ ದೂರು ದಾಖಲಿಸಿ ಎಂದು ಇಲಾಖೆ ಮನವಿ ಮಾಡಿದೆ.

By Ravikumar - 31-05-2026


Ads in Post