Search


ಮಾಧ್ಯಮಗಳ ಲೈಸೆನ್ಸ್‌ ರದ್ದಾಗುವ ಸಾಧ್ಯತೆ; ದರ್ಶನ್‌ ಹೋರಾಟಕ್ಕೆ ದೊಡ್ಡ ಜಯ..!

ಬೆಂಗಳೂರು : ನಟ ದರ್ಶನ್‌ ವಿರುದ್ದ  ಮನಬಂದ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಿದ್ದ ನ್ಯೂಸ್‌ ಚಾನಲ್‌ಗಳಿಗೆ ಕರ್ನಾಟಕ ಹೈಕೋರ್ಟ್‌ ಶಾಕ್‌ ಕೊಟ್ಟಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಂಚಲನಕಾರಿ ವರದಿಗಳನ್ನ ಪ್ರಕಟಿಸಿದ ಟಿವಿ ಚಾನೆಲ್‌ಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದ್ದು. ಇದರಿಂದಾಗಿ ಕೆಲ ಚಾನಲ್‌ಗಳಿಗೆ ಭಾರೀ ಪ್ರಮಾಣದ ದಂಡ ಮತ್ತು ಚಾನಲ್‌ ಲೈಸೆನ್ಸ್‌ ರದ್ದಾಗುವ ಭೀತಿ ಎದುರಾಗಿದೆ.  


ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಗಾದೆ ಕನ್ನಡದ ಸುದ್ದಿವಾಹಿನಿಗಳಿಗೆ ಸರಿಯಾಗಿ ಅನ್ವಯವಾಗುತ್ತದೆ, ಪತ್ರಿಕೋದ್ಯಮವನ್ನ ಕೇವಲ ಉದ್ಯಮವನ್ನಾಗಿ ನೋಡುವ ಕೆಲ ಮಾಧ್ಯಮಗಳು ಟಿಆರ್‌ಪಿ ಹಿಂದೆ ಹುಚ್ಚೆದ್ದವರಂತೆ ಓಡುತ್ತಿವೆ. ಜನ ನಮ್ಮ ಚಾನಲ್‌ ನೋಡಿದರೆ ಸಾಕು ಅದಕ್ಕಾಗಿ ನಾವು ಏನು ಮಾಡಲು ಬೇಕಾದರು ಸಿದ್ದ ಎಂಬ ಹಾದಿ ತುಳಿದಿವೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ರೇಣುಕಾಸ್ವಾಮಿ ಹತ್ಯೆ ಪ್ರಕರಣ.

 ಹೌದು.... ಕಳೆದ 2024ರ ಜೂನ್‌ 9ರಂದು ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ರಾಜಕಾಲುವೆ ಪಕ್ಕದಲ್ಲಿ ಪತ್ತೆಯಾಗಿತ್ತು. ಈ ಸುದ್ದಿಯನ್ನ ಕೆಲ ಮಾಧ್ಯಮಗಳು ಹತ್ತರಲ್ಲಿ ಹನ್ನೊಂದು ಎಂಬಂತೆ ವರದಿ ಮಾಡಿ ಸುಮ್ಮನಾಗಿದ್ವವು. ಆದರೆ ಯಾವಾಗ ಈ ಶವಕ್ಕೂ ನಟ ದರ್ಶನ್‌ಗೂ ಸಂಬಂಧವಿದೆ ಎಂಬುದು ತಿಳಿಯಿತೊ ಅಂದಿನಿಂದ ಶುರುವಾಯ್ತು ನೋಡಿ ನ್ಯೂಸ್‌ ಚಾನಲ್‌ಗಳ ಅಬ್ಬರ. ದಿನದ ಬಹುಪಾಲು ಸಮಯವನ್ನ ಈ ವರದಿಗೆ ಮುಡಿಪಾಗಿಟ್ಟ ನಮ್ಮ ಮಾಧ್ಯಮಗಳು, ದರ್ಶನ್‌ ಕೊಲೆ ಮಾಡಿದ್ದನ್ನ ಕಣ್ಣಾರೆ ಕಂಡಿರುವುದಾಗಿ ವರದಿ ಮಾಡಿ, ನ್ಯಾಯಲಯಕ್ಕೆ ಕೇಸ್‌ ಬರುವ ಮುನ್ನವೇ ತೀರ್ಪು ಬರೆದು ಬಿಟ್ಟವು. 

ಮೀಡಿಯಾಗಳ ವಿರುದ್ದ ಕ್ರಮಕ್ಕೆ ಹೈಕೋರ್ಟ್‌ ಸೂಚನೆ...!

ಮಾಧ್ಯಮಗಳು ನಡೆಸುತ್ತಿರುವ ಮೀಡಿಯಾ ಟ್ರಯಲ್‌ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ನಟ ದರ್ಶನ್‌ ಪರ ವಕೀಲರು, ನ್ಯಾಯಾಲಯಕ್ಕೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠವು " ಮೀಡಿಯಾ ಟ್ರಯಲ್‌ ವಿರುದ್ದ ಕಠಿಣ ಎಚ್ಚರಿಕೆ ನೀಡಿದ್ದು. ಸಂವಿಧಾನದ ವಿಧಿ 21ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಸಮ್ಮತ ವಿಚಾರಣೆಗೆ ಹಕ್ಕು ದೊರಕುತ್ತದೆ. ಈ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಕಡಿಮೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ನಟ ದರ್ಶನ್‌ ಸಲ್ಲಿಸಿದ ಅಧಿಕೃತ ದೂರಿನ ಪರಿಶೀಲನೆ ನಡೆಸಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY)ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ 6 ವಾರಗಳ ಗಡುವು ನಿಗದಿಪಡಿಸಿದೆ.

ಮಾಧ್ಯಮಗಳು ಕಾವಲು ನಾಯಿಯಾಗಿರಬೇಕೆ ವಿನಃ ನ್ಯಾಯಧೀಶರಾಗಬಾರದು...!

ದರ್ಶನ್ ಪರ ವಕೀಲರು ಸುಮಾರು 1,000ಕ್ಕೂ ಹೆಚ್ಚು ಆನ್‌ಲೈನ್ ಪ್ರಸಾರ ಕ್ಲಿಪ್‌ಗಳನ್ನ ನ್ಯಾಯಾಲಯದ ಮುಂದೆ ಮಂಡಿಸಿದ್ದು,  ಪೂರ್ವಾಗ್ರಹಪೂರಿತ ಪ್ರಸಾರಗಳು ಪ್ರಕರಣಕ್ಕೆ ಹಾನಿ ಉಂಟುಮಾಡುತ್ತಿದೆ ಎಂದು ವಾದ ಮಂಡಿಸಿದರು.  ಈ ವಾದವನ್ನ ಆಲಿಸಿದ ನ್ಯಾಯಪೀಠ  " ಈ ಪ್ರಕರಣದಲ್ಲಿ ಕೆಲ ಮಾಧ್ಯಮ ಸಂಸ್ಥೆಗಳು ವಹಿಸಿದ ಪಾತ್ರವನ್ನ ತೀವ್ರವಾಗಿ ಟೀಕಿಸಿದರು, ಜೊತೆಗೆ ಮಾಧ್ಯಮಗಳು ಸಮಾಜದ ಕಾವಲು ನಾಯಿಯಾಗಿರಬೇಕು ಆದರೆ ಇವರು ನ್ಯಾಯಾದೀಶ, ಶಿಕ್ಷಾಧಿಕಾರಿಯಾಗಿದ್ದಾರೆ. ಜೊತೆಗೆ ಕೆಲ ಚಾನಲ್‌ಗಳು ನ್ಯಾಯಾಲಯದ ವಿಚಾರಣೆಯನ್ನ ಮರುಸೃಷ್ಟಿಸಿ ಪ್ರಸಾರ ಮಾಡಿರುವುದನ್ನ ಕಟುವಾಗಿ ಖಂಡಿಸಿದ ನ್ಯಾಯಪೀಠ. ಮಾಧ್ಯಮಗಳ ನಡೆಯನ್ನು ಗಂಭೀರವಾಗಿ ಪರಿಗಣಿಸಿತು.

ಪ್ರಮುಖ ಸುದ್ದಿ ಸಂಸ್ಥೆಗಳಿಗೆ ಲೈಸೆನ್ಸ್‌ ರದ್ದಾಗುವ ಆತಂಕ...!

ದರ್ಶನ್‌ ಪರ ವಕೀಲರು, ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ (ರೆಗ್ಯುಲೇಶನ್) ಕಾಯ್ದೆ, 1995ರ ಕಾರ್ಯಕ್ರಮ ಸಂಹಿತೆಯನ್ನ ಕೆಲ ಮಾಧ್ಯಮಗಳು ಉಲ್ಲಂಘಿಸಿವೆ ಎಂದು ಆರೋಪಿಸಿದ್ದು. ಪ್ರಮುಖ ಸುದ್ದಿ ವಾಹಿನಿಗಳಾದ ರಿಪಬ್ಲಿಕ್‌ ಕನ್ನಡ (Republic TV Kannada), ಟಿವಿ 9 ಕನ್ನಡ (TV9 Kannada), ಪಬ್ಲಿಕ್‌ ಟಿವಿ (Public TV) ಏಷಿಯಾನೆಟ್‌ ಸುವರ್ಣ ನ್ಯೂಸ್‌ (Asianet Suvarna), ಟಿವಿ 5 (TV5), ಪವರ್‌ ಟಿವಿ (Power TV News), ಇಂಡಿಯಾ ಟುಡೇ (India Today), ರಿಪಬ್ಲಿಕ್‌ ವರ್ಲ್ಡ್‌ (Republic World) ಚಾನಲ್‌ಗಳ ಹೆಸರನ್ನ ಉಲ್ಲೇಖಿಸಿದ್ದಾರೆ.ಈ ಸುದ್ದಿವಾಹಿನಿಗಳು ಪ್ರಸಾರ ಕಾಯ್ದೆಯನ್ನ ಉಲ್ಲಂಘಿಸಿರುವುದನ್ನ ಪರಿಶೀಲಿಸಲು ಸಂಬಂಧಿತ ಅಧಿಕಾರಿಗಳಿಗೆ ಹೈಕೋರ್ಟ್‌ ನಿರ್ದೇಶನ ನೀಡಿದ್ದು.  ಉಲ್ಲಂಘನೆ ದೃಡಪಟ್ಟರೆ ಕಾಯ್ದೆಯ ಸೆಕ್ಷನ್‌ 19 ಮತ್ತು 20 ಅಡಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹೈಕೋರ್ಟ್‌ ಸೂಚನೆ ನೀಡಿದೆ.

ಒಂದು ವೇಳೆ ಈ ಆರೋಪ ದೃಡಪಟ್ಟರೆ ತಪ್ಪಿತಸ್ಥ ಸುದ್ದಿವಾಹಿನಿಗಳ ಲೈಸೆನ್ಸ್‌ ರದ್ದು ಮಾಡುವ ಸಾಧ್ಯತೆ ಇದ್ದು, ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ. 12 ವಾರಗಳ ಒಳಗೆ ಕೈಗೊಂಡ ಕ್ರಮಗಳ ಕುರಿತು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚನೆ ನೀಡಿದೆ. ಜೊತೆಗೆ ಅಗತ್ಯವಿದ್ದಲಿ ಸಂಬಂಧಿತ ಮಾಧ್ಯಮಗಳ ವಿರುದ್ದ ನಟ ದರ್ಶನ್‌ ನ್ಯಾಯಾಂಗ ನಿಂದನೆ ಪ್ರಕರಣ ಹೂಡುವ ಅವಕಾಶವನ್ನು ನ್ಯಾಯಾಲಯ ನೀಡಿದೆ. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಮಾಧ್ಯಮಗಳು ತೋರಿದ ನಡೆಯನ್ನ ನ್ಯಾಯಾಲಯ ಖಂಡಿಸಿದ್ದು. ಮುಂಬರುವ ದಿನದಲ್ಲಿ ಕೇಂದ್ರ ಸರ್ಕಾರ ಈ ಚಾನಲ್‌ಗಳ ವಿರುದ್ದ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನ  ಕಾದು ನೋಡಬೇಕಿದೆ. 
 

By thebigbulletin.com - 18-05-2026


Ads in Post