ಬೆಂಗಳೂರು: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಸದಾಶಿವನಗರದಲ್ಲಿರುವ ಪರಮೇಶ್ವರ್ ನಿವಾಸದಲ್ಲಿ ಚರ್ಚೆ ನಡೆಸಿದ ಬಳಿಕ ಹರಿಪ್ರಸಾದ್ ನಿವಾಸಕ್ಕೂ ತೆರಳಿ ಅರ್ಧ ಗಂಟೆಗೂ ಹೆಚ್ಚು ಕಾಲ ರಾಜಕೀಯ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು.
ಭೇಟಿ ಬಳಿಕ ಮಾತನಾಡಿದ ರಾಜಣ್ಣ, ಅಪೆಕ್ಸ್ ಬ್ಯಾಂಕ್ನಲ್ಲಿ ರೈತರ ನೆರವಿಗೆ ಸರ್ಕಾರದ ಸಹಕಾರ ಅತ್ಯಂತ ಮುಖ್ಯ. ಸರ್ಕಾರದ ಪರ ಇರುವವರು ಅಧಿಕಾರದಲ್ಲಿದ್ದರೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ತಾವು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾಗಿ ಹೇಳಿದರು. “ನಾನು ಸ್ಪರ್ಧೆ ಮಾಡಿದ್ದರೆ ನಾನೇ ಗೆಲ್ಲುತ್ತಿದ್ದೆ. ಸಿದ್ದರಾಮಯ್ಯ ನನ್ನ ಪರವಾಗಿಯೇ ಇದ್ದರು, ಆದರೆ ಈ ವಿಚಾರದಲ್ಲಿ ಅವರ ಮಾತು ನಡೆದಿಲ್ಲ. ರಾಜ್ಯ ನಾಯಕರು ಅಥವಾ ಎಐಸಿಸಿ ನಾಯಕರಿಂದ ಎಲ್ಲಿ ಹಿನ್ನಡೆಯಾಯಿತೋ ಗೊತ್ತಿಲ್ಲ, ಎರಡೂವರೆ ವರ್ಷಗಳ ಬಳಿಕವೂ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿಯಲ್ಲ, ಸ್ಪರ್ಧಿಯೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ನಾಯಕರ ಭೇಟಿ ವೇಳೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ರಾಜಣ್ಣ ಹೇಳಿದರು. ಮುಂದಿನ ಚುನಾವಣೆಯಲ್ಲಿ ವಿಧಾನಸಭೆ ಬದಲಾಗಿ ಲೋಕಸಭೆಗೆ ಸ್ಪರ್ಧಿಸುವುದಾಗಿ ತಿಳಿಸಿದಾಗ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು. 35 ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಮಹಿಳೆಯರಿಗೆ ಸ್ಥಾನ ಸಿಗದ ಬಗ್ಗೆಯೂ ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರೊಂದಿಗೆ ಚರ್ಚಿಸುವಂತೆ ತಿಳಿಸಿದ್ದಾಗಿ ಹೇಳಿದರು.
ಸರ್ಕಾರದ ನೂರು ದಿನಗಳ ಸಂಭ್ರಮಾಚರಣೆಗೆ ಬಿ.ಕೆ. ಹರಿಪ್ರಸಾದ್ ಅವರಿಗೆ ಆಹ್ವಾನ ನೀಡಬೇಕಿತ್ತು ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು. “ಡಿಕೆ ಶಿವಕುಮಾರ್ ಅಧ್ಯಕ್ಷರಾಗಿದ್ದರೆ ಬಿಡುತ್ತಿದ್ದರಾ? ಸಿದ್ದರಾಮಯ್ಯ ಅವರೇ ಕರೆದು ಮಾತನಾಡಬೇಕಿತ್ತು. ಇಲ್ಲಿನ ಬೆಳವಣಿಗೆಗಳನ್ನು ಎಐಸಿಸಿಗೆ ತಿಳಿಸಬೇಕಾಗುತ್ತದೆ. ಕಾಲಕ್ರಮೇಣ ಎಲ್ಲವೂ ಸರಿಹೋಗಲಿದೆ” ಎಂದರು.
ಇದೇ ವೇಳೆ “ಅಧಿಕಾರ ಅನ್ನೋದು ವಿಷವಿದ್ದಂತೆ, ಗಿಡದ ಸುತ್ತ ಕಳೆ ಬೆಳೆದಂತೆ” ಎಂದು ಮಾರ್ಮಿಕವಾಗಿ ಹೇಳಿದ ರಾಜಣ್ಣ, ಸತೀಶ್ ಜಾರಕಿಹೊಳಿ ಹೇಳಿದ್ದನ್ನು ಸಂಪೂರ್ಣವಾಗಿ ನಂಬುವುದಾಗಿ ತಿಳಿಸಿದರು. ಮುಡಾ ವಿಚಾರದಲ್ಲಿ ದೂರು ನೀಡಿದ್ದು ಕಾಂಗ್ರೆಸ್ನವರೇ ಅಲ್ಲವೇ? ಕೃಷ್ಣ ಎಂಬಾತ ತಾನಾಗಿಯೇ ಸುಪ್ರೀಂ ಕೋರ್ಟ್ವರೆಗೆ ಹೋದನೇ? ನಮ್ಮವರೇ ಪ್ರಬಲರ ಬೆಂಬಲವಿಲ್ಲದೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸುವ ಮೂಲಕ ಸ್ವಪಕ್ಷದ ನಾಯಕರ ವಿರುದ್ಧವೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.