ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದ ಬಾಹುಬಲಿ (Bahubali 3) ಸಿನಿಮಾದ 3ನೇ ಭಾಗ ಬರೋದು ಖಚಿತವಾಗಿದೆ. ಈ ಕುರಿತು ಸಿನಿಮಾದ ಮುಖ್ಯತಾರಾಗಣವಾದ ಪ್ರಭಾಸ್, ಅನುಷ್ಕಾ ಮತ್ತು ರಾಣಾ ದಗ್ಗುಬಾಟಿ ಸ್ಪಷ್ಟನೆ ನೀಡಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ʻಬಾಹುಬಲಿʼ ಮತ್ತು ʻಬಾಹುಬಲಿ 2ʼ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಈ ಸಿನಿಮಾದ ಮೂರನೇ ಭಾಗ ಬರಲಿದೆಯಾ ಎಂಬ ಪ್ರಶ್ನೆ ಅನೇಕ ಬಾರಿ ಮುನ್ನಲೆಗೆ ಬಂದಿತ್ತು. ನಿರ್ದೇಶಕ ರಾಜಮೌಳಿ ಅವರ ಬಳಿ ಈ ಬಗ್ಗೆ ಕೇಳಿದ್ದಾಗ ಅವರು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಇದೀಗ ಈ ಪ್ರಶ್ನೆಗೆ ಚಿತ್ರದ ಮುಖ್ಯ ತಾರಾಗಣದವರಾದ ಪ್ರಭಾಸ್, ರಾಣಾ ದಗ್ಗುಬಾಟಿ ಹಾಗೂ ಅನುಷ್ಕಾ ಶೆಟ್ಟಿ ಸಿನಿಮಾದ 3ನೇ ಆವೃತ್ತಿ ಬರುತ್ತೆ ಎಂದು ಖಚಿತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಮೂವರೂ ಒಟ್ಟಿಗೆ ಕುಳಿತು ಮಾತನಾಡಿರುವ ವಿಶೇಷ ವಿಡಿಯೋವೊಂದು ಬಿಡುಗಡೆಯಾಗಿದ್ದು, ಚಿತ್ರದ ದೃಶ್ಯಗಳ ಕುರಿತು, ಸಿನಿಮಾ ಶೂಟ್ ಸೆಟ್ನ ಸಿಹಿ ಅನುಭವವನ್ನು ಇವರು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಒಂದು ದೊಡ್ಡ ಅಪ್ಡೇಟ್ ಕೂಡ ನೀಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ರಾನಾ ದಗ್ಗುಬಾಟಿ (Rana Daggubati) ಅವರು ಮಾತನಾಡುತ್ತಾ, ‘ಇದನ್ನು ನಿಮ್ಮ ಹತ್ತಿರ ಹೇಳಬೇಕೋ ಬೇಡವೋ ಗೊತ್ತಿಲ್ಲ. ಈಗ ಇಲ್ಲಿ ರಾಜಮೌಳಿ ಅವರಾಗಲಿ ಅಥವಾ ನಿರ್ಮಾಪಕರಾಗಲಿ ಇಲ್ಲ. ಅದಕ್ಕೆ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ಈ ಜಗತ್ತು ಇನ್ನೂ ಅದಕ್ಕೆ ಸಿದ್ಧವಾಗಿಲ್ಲದೇ ಇರಬಹುದು. ಆದರೆ ‘ಬಾಹುಬಲಿ…’ ಬರಲಿದೆ’ ಎಂದು ಅರ್ಧಕ್ಕೆ ನಿಲ್ಲಿಸಿದ್ದಾರೆ. ತಕ್ಷಣವೇ ನಟಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ‘ಬಾಹುಬಲಿ 3’ ಎಂದು ಧ್ವನಿಗೂಡಿಸಿ ನಗುತ್ತಾರೆ. ವಿಡಿಯೋದ ಕೊನೆಯಲ್ಲಿ ‘ಆ್ಯಂಡ್ ದಿ ಲೆಗಸಿ ಕಂಟಿನ್ಯೂಸ್ ಅಂದರೆ ಪರಂಪರೆ ಮುಂದುವರಿಯುತ್ತದೆ ಎಂಬ ಬರಹ ಮೂಡಿಬಂದಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಖುಷಿ ಹೆಚ್ಚಿಸಿದೆ.
ಸದ್ಯ ಸಿನಿಮಾದ ನಿರ್ದೇಶಕ ರಾಜಮೌಳಿ ಅವರು ಮಹೇಶ್ ಬಾಬು ನಟನೆಯ ʻವಾರಣಾಸಿʼ ಸಿನಿಮಾದ ಕೆಲಸದಲ್ಲಿ ಬ್ಯುಸಿ ಆಗಿದ್ದು. ವರ್ಷಾಂತ್ಯದ ಒಳಗೆ ಈ ಸಿನಿಮಾ ತೆರೆ ಮೇಲೆ ಬರಲಿದೆ. ಇದಾದ ನಂತರ ರಾಜಮೌಳಿ ಅವರು ಬಾಹುಬಲಿ 3 ಸಿನಿಮಾದ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡುವ ಸಾಧ್ಯತೆ ಇದ್ದು, ಚಿತ್ರಕಥೆ ಸಿದ್ದವಾದ ನಂತರ ಸಿನಿಮಾದ ಶೂಟಿಂಗ್ ಆರಂಭವಾಗುವ ನಿರೀಕ್ಷೆಯಿದೆ.