ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದ ಆರೋಪಿ ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ (Approver) ಅರ್ಜಿಯನ್ನು ಸಿಸಿಹೆಚ್ 59ನೇ ನ್ಯಾಯಾಲಯ ಅಂಗೀಕರಿಸಿದೆ.
ಪ್ರದೋಷ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ, ಅವರು ಮಾಫಿ ಸಾಕ್ಷಿಯಾಗುವುದನ್ನು ತಡೆಯುವಂತೆ ನಟ ದರ್ಶನ್ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ಅಂಗೀಕರಿಸಿದೆ.
ಇದೇ ವೇಳೆ, ಪ್ರದೋಷ್ಗೆ ಮಾಫಿ ಸಾಕ್ಷಿಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ನ್ಯಾಯಾಲಯ ವಿವರಿಸಿದೆ. ಮುಂದಿನ ಪ್ರಕ್ರಿಯೆಗಾಗಿ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸುವ ಸಾಧ್ಯತೆಯಿದೆ. ಈ ಹಿಂದೆ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್ ಮಾರ್ಪಡಿಸಿತ್ತು. ಅಲ್ಲದೆ, ಹೊಸದಾಗಿ ಆದೇಶ ಹೊರಡಿಸುವಂತೆ ಸೂಚಿಸಿತ್ತು. ಹೈಕೋರ್ಟ್ ಸೂಚನೆಯಂತೆ ಇದೀಗ ಸೆಷನ್ಸ್ ಕೋರ್ಟ್ ಹೊಸ ಆದೇಶ ಹೊರಡಿಸಿದ್ದು, ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಗೆ ಮುಂದಿನ ಹಂತಕ್ಕೆ ದಾರಿ ಮಾಡಿಕೊಟ್ಟಿದೆ.