Search


ಅಜ್ಜಿ ಚೆನ್ನಮ್ಮ ಅಗಲಿಕೆಗೆ ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದಿಂದ ಗೌಡರ ಕುಟುಂಬದಲ್ಲಿ ಶೋಕ ಆವರಿಸಿದೆ. ಕುಟುಂಬದ ಎಲ್ಲ ಸದಸ್ಯರು ದುಃಖದಲ್ಲಿರುವ ನಡುವೆಯೇ, ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೂಡ ಅಜ್ಜಿಯ ಅಗಲಿಕೆಯ ಸುದ್ದಿ ಕೇಳಿ ಭಾವುಕರಾಗಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ, ಅಜ್ಜಿ ಚೆನ್ನಮ್ಮ ಅವರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಪ್ರಜ್ವಲ್, ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕಣ್ಣೀರು ಹಾಕಿದ್ದಾರೆ. ಅಜ್ಜಿಯ ಕೊನೆಯ ಕ್ಷಣದಲ್ಲಿ ಅವರ ಮುಖವನ್ನೂ ನೋಡಲು ಸಾಧ್ಯವಾಗಲಿಲ್ಲ ಎಂಬ ನೋವು ಅವರನ್ನು ಮತ್ತಷ್ಟು ಕಾಡಿದೆ. ಅಜ್ಜಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಪ್ರಜ್ವಲ್, ರಾತ್ರಿಯಿಡೀ ನಿದ್ದೆ ಮಾಡದೇ ಮೌನದಲ್ಲೇ ಕಾಲ ಕಳೆದಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ, ಚೆನ್ನಮ್ಮ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಸಮೀಪದ ಕ್ಯಾತನಹಳ್ಳಿಯಲ್ಲಿರುವ ದೇವೇಗೌಡರ ಕುಟುಂಬದ ಜಮೀನಿನಲ್ಲಿ ನಾಳೆ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.

ಅಂತಿಮ ವಿಧಿ ನಡೆಯಲಿರುವ ಸ್ಥಳದಲ್ಲಿ ನೆಲ ಸಮತಟ್ಟು ಮಾಡುವ ಕೆಲಸ ಪೂರ್ಣಗೊಂಡಿದ್ದು, ಶಾಮಿಯಾನ, ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಮೈಸೂರಿನಿಂದ ಸುಮಾರು ನಾಲ್ಕು ಸಾವಿರ ಕುರ್ಚಿಗಳನ್ನು ತರಿಸಿ ಅಳವಡಿಸುವ ಕಾರ್ಯವೂ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಅಧಿಕಾರಿಗಳು ಮತ್ತು ಕುಟುಂಬಸ್ಥರು ಕೈಗೊಂಡಿದ್ದಾರೆ.

By Ravikumar - 19-07-2026


Ads in Post