ಹಾಸನ: ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಿ ಎರಡು ವರ್ಷ ಕಳೆದ ಬಳಿಕ ಇದೀಗ ಹೊಸದಾಗಿ ಫೋನ್ ಮತ್ತು ಪೆನ್ಡ್ರೈವ್ ವಿಚಾರವನ್ನು ಮುನ್ನೆಲೆಗೆ ತಂದು ಕಥೆ ಕಟ್ಟಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯಲ್ಲಿ ತಾಯಿಯ ಸಮಾಧಿಗೆ ನಮಿಸಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದರು.
‘ನನ್ನ ಮನೆ ಅಲುಗಾಡಿಸಿದವರು ಯಾರು ಎಂಬುದು ನಿಮಗೆ ಗೊತ್ತಿದೆ. ಒಂದು ಸಾಕ್ಷಿ ಸಿದ್ಧಪಡಿಸಲು ಸಾಕಾಗಿದೆ ಎಂದು ಯಾರು ಹೇಳಿದ್ದರು? ದೇವೇಗೌಡರ ಕುಟುಂಬವನ್ನು ಮುಗಿಸುತ್ತೇವೆ ಎಂದು ಯಾರು ಹೇಳಿದ್ದರು? ಇದೇ ಮುಖ್ಯಮಂತ್ರಿ ಅಲ್ಲವೇ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
‘ಆ ವ್ಯಕ್ತಿಯನ್ನು ಬಂಧಿಸಿ ನಾಲ್ಕು ದಿನ ಜೈಲಿನಲ್ಲಿಟ್ಟಿದ್ದೇಕೆ? ಕಳೆದ ಎರಡು ವರ್ಷಗಳಿಂದ ಯಾವುದೇ ಫೋನ್ ಇರಲಿಲ್ಲವೇ? ಬಿಡದಿ, ಕೆಪಿಎಸ್ಸಿ ಹಾಗೂ ನೈಸ್ ವಿಚಾರಗಳು ಚರ್ಚೆಗೆ ಬಂದ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಫೋನ್, ಪೆನ್ಡ್ರೈವ್ ಹಾಗೂ ಅಶ್ಲೀಲ ಚಿತ್ರಗಳ ವಿಚಾರ ಮುನ್ನೆಲೆಗೆ ಬಂದಿದೆ. ಎರಡು ವರ್ಷಗಳಿಂದ ಜೈಲಿನಲ್ಲಿದ್ದ ವ್ಯಕ್ತಿಯ ಬಳಿ ಈಗ ಫೋನ್ ಸಿಕ್ಕಿದೆ ಎಂದು ಹೊಸ ಕಥೆ ಆರಂಭಿಸಲಾಗಿದೆ’ ಎಂದು ಆರೋಪಿಸಿದರು.
ಪ್ರತಿನಿತ್ಯ ಹೊಸ ಸರಣಿ ರೀತಿಯಲ್ಲಿ ವಿಚಾರಗಳನ್ನು ಹೊರತರುತ್ತಿರುವುದೇಕೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ‘ಇಷ್ಟು ದಿನ ಏಕೆ ಈ ವಿಚಾರವನ್ನು ಹೇಳಲಿಲ್ಲ? ಎರಡು ವರ್ಷಗಳಿಂದ ಫೋನ್ ಇರಲಿಲ್ಲವೇ? ಈಗ ಹೇಗೆ ಬಂತು? ಜೈಲಿನಲ್ಲಿರುವ ವ್ಯಕ್ತಿಗೆ ಅಶ್ಲೀಲ ಚಿತ್ರಗಳನ್ನು ನೀಡಿದವರು ಯಾರು? ಅವು ಜೈಲಿನೊಳಗೆ ಹೇಗೆ ಬಂದವು? ಯಾರು ಪೂರೈಸಿದರು? ಇದನ್ನು ನಾವು ಮಾಡಿಸಿದ್ದೇವೆಯೇ?’ ಎಂದು ಪ್ರಶ್ನೆಗಳ ಸುರಿಮಳೆಗೈದರು.
ಬಿಡದಿ ವಿಚಾರಕ್ಕೆ ವಿರೋಧ ವ್ಯಕ್ತವಾಗಿರುವುದು ಹಾಗೂ ನೈಸ್ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಮುನ್ನೆಲೆಗೆ ತಂದು ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು. ‘ನಿಮ್ಮ ಕೈಯಲ್ಲಿ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ’ ಎಂದು ಅವರು ಹೇಳಿದರು.