Search


ಮತದಾರ ಪಟ್ಟಿಯಿಂದ ಪ್ರಕಾಶ್ ರಾಜ್ ಹೆಸರು ಡಿಲೀಟ್; ಚುನಾವಣಾ ಆಯೋಗಕ್ಕೆ ಎಚ್ಚರಿಕೆ ಕೊಟ್ಟ ನಟ

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದ್ದು, ಈ ನಡುವೆ ಖ್ಯಾತ ನಟ ಪ್ರಕಾಶ್ ರೈ ಅವರ ಮತವನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕಾಶ್ ರೈ ಅವರೇ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಪ್ರಕಾಶ್ ರೈ, ಬೆಂಗಳೂರಿನಲ್ಲಿ SIR ಪ್ರಕ್ರಿಯೆ ಅಡಿಯಲ್ಲಿ ಡಿಲೀಟ್ ಆಗಿರುವ 65 ಲಕ್ಷ ಮತದಾರರಲ್ಲಿ ತಾನೂ ಒಬ್ಬ ಎಂದು ಹೇಳಿದ್ದಾರೆ. ತಾವು ಹುಟ್ಟಿ, ಬೆಳೆದ ಕ್ಷೇತ್ರದಲ್ಲೇ ತಮ್ಮ ಮತವನ್ನು ತೆಗೆದುಹಾಕಲಾಗಿದೆ. ಇದೇ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದೆ. ಆದರೂ ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಜೋಕ್ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಪ್ರಕಾಶ್ ರೈ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದರು. ಆದರೆ, ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ ಎಂಬ ಆರೋಪದಡಿ ಅವರ ವಿರುದ್ಧ ಈ ಹಿಂದೆಯೇ ದೂರು ದಾಖಲಾಗಿತ್ತು.

2019ರಲ್ಲೇ ಪ್ರಕಾಶ್ ರೈ ವಿರುದ್ಧ ಈ ಸಂಬಂಧ ದೂರು ದಾಖಲಾಗಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ. ಬೆಂಗಳೂರಿನ ಶಾಂತಿನಗರ, ಚೆನ್ನೈನ ವಲಚೇರಿ ಹಾಗೂ ತೆಲಂಗಾಣದ ಸೆರಿಲಿಂಗಪಲ್ಲಿ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದೆ ಎಂಬ ಆರೋಪ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ 2025ರಲ್ಲಿ ಪ್ರಕಾಶ್ ರೈ ವಿರುದ್ಧ ವಾರೆಂಟ್ ಕೂಡ ಜಾರಿಯಾಗಿತ್ತು. ಬಳಿಕ 2026ರ ಜುಲೈ 10ರಂದು ಅವರು ಷರತ್ತುಬದ್ಧ ಜಾಮೀನು ಪಡೆದಿದ್ದರು. ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ.

ಇದೀಗ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮತದಾನದ ಹಕ್ಕು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ SIR ಪ್ರಕ್ರಿಯೆಯಲ್ಲಿ ಅವರ ಮತವನ್ನು ತೆಗೆದುಹಾಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ತಮ್ಮ ಮತವನ್ನು ಮರಳಿ ಪಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಕಾಶ್ ರೈ ಹೇಳಿದ್ದಾರೆ. ಎಷ್ಟು ದಾಖಲೆಗಳನ್ನು ನೀಡಬೇಕಾದರೂ ನೀಡುತ್ತೇನೆ. ‘ನೀವು ನಿಮಗೆ ಮತ ಹಾಕದವರ ಮತವನ್ನು ಡಿಲೀಟ್ ಮಾಡಬಹುದು. ಆದರೆ ನಾವು ಸುಮ್ಮನೆ ಕೂರುವವರಲ್ಲ’ ಎಂದು ಅವರು ಹೇಳಿದ್ದಾರೆ.

By Ravikumar - 11-08-2026


Ads in Post