ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಇಸ್ಲಾಂ ಧರ್ಮದ ಕುರಿತು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಗೆ ಬಿಜೆಪಿ ನಾಯಕರಾದ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ತೀವ್ರವಾಗಿ ವ್ಯಂಗ್ಯವಾಡಿದರು. ಆರು ಬಾರಿ ಶಾಸಕರಾಗಿ, ಸಚಿವರಾಗಿದ್ದರೂ ರಾಯರೆಡ್ಡಿ ಅವರಿಗೆ ಸಮಾಧಾನ ಸಿಕ್ಕಿಲ್ಲ. ಎಲ್ಲೂ ಸಿಗದ ಸುಖ ಇಸ್ಲಾಂ ಧರ್ಮದಲ್ಲಿ ಸಿಗುತ್ತದೆ ಎಂದು ಅವರು ಅಂದುಕೊಂಡಿರಬಹುದು. ಸತ್ತ ನಂತರ 72 ಕನ್ಯೆಯರು ಸಿಗಬಹುದು ಎಂದು ಅಂದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು.
ಮಾನವತಾವಾದಿ ಹಾಗೂ ದಾರ್ಶನಿಕ ಬಸವಣ್ಣನವರ ಪರಂಪರೆಗೆ ಸೇರಿದವರು ನೀವು. ಈ ರೀತಿಯಾಗಿ ಸಾರ್ವಜನಿಕವಾಗಿ ತಮ್ಮ ಆಸೆ-ಆಕಾಂಕ್ಷೆಗಳನ್ನು ವ್ಯಕ್ತಪಡಿಸಬಾರದು ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದರು. ರಾಯರೆಡ್ಡಿ ಅವರು ದೇವಸ್ಥಾನ ಹಾಗೂ ಮಠಗಳಿಗೆ ಹೋಗುವುದಿಲ್ಲ, ಮೆಕ್ಕಾಗೆ ಹೋಗುವ ಆಸೆಯಿದೆ ಮತ್ತು ಇಸ್ಲಾಂ ಧರ್ಮ ಶ್ರೇಷ್ಠವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿದ ಪ್ರತಾಪ್ ಸಿಂಹ, ಹಲವು ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿದ ಬಳಿಕವೂ ಅವರಿಗೆ ಸಮಾಧಾನ ಸಿಕ್ಕಿಲ್ಲವೆಂದರೆ ಇಸ್ಲಾಂ ಧರ್ಮದಲ್ಲಿ ಏನಾದರೂ ವಿಶೇಷ ಲಾಭವಿದೆ ಎಂದು ಭಾವಿಸಿರಬಹುದು ಎಂದು ಟೀಕಿಸಿದರು.
ಇದೇ ವಿಚಾರವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇಸ್ಲಾಂ ಧರ್ಮದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿರುವ ಕಾರಣದಿಂದಲೇ ರಾಯರೆಡ್ಡಿ ಅವರು ಆ ಧರ್ಮವನ್ನು ಶ್ರೇಷ್ಠವೆಂದು ಹೇಳಿರಬಹುದು ಎಂದು ವ್ಯಂಗ್ಯವಾಡಿದರು. ಇಸ್ಲಾಂ, ಕ್ರಿಶ್ಚಿಯನ್ ಹಾಗೂ ಬೌದ್ಧ ಧರ್ಮಗಳು ವ್ಯಕ್ತಿಗಳಿಂದ ಸ್ಥಾಪಿಸಲ್ಪಟ್ಟ ಮತಗಳಾಗಿದ್ದು, ಸನಾತನ ಧರ್ಮಕ್ಕೆ ಆದಿ ಅಥವಾ ಅಂತ್ಯವಿಲ್ಲ ಎಂದು ಸಿ.ಟಿ. ರವಿ ಪ್ರತಿಪಾದಿಸಿದರು. ಸನಾತನ ಧರ್ಮವನ್ನು ನಾಶಪಡಿಸಲು ಬಂದ ಅನೇಕ ಶಕ್ತಿಗಳೇ ಕಾಲಕ್ರಮೇಣ ನಾಶವಾಗಿವೆ ಎಂದೂ ಹೇಳಿದರು.
ಮುಸ್ಲಿಂ ಸಮಾಜದಲ್ಲಿ ಮಹಿಳೆಯರ ಸ್ಥಿತಿಗೆ ಸಂಬಂಧಿಸಿದಂತೆ ಡಾ. ಬಿ.ಆರ್. ಅಂಬೇಡ್ಕರ್ ತಮ್ಮ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದ ಸಿ.ಟಿ. ರವಿ, ಅಂಬೇಡ್ಕರ್ ಅವರ ಬರಹಗಳನ್ನು ಓದಬೇಕು ಎಂದು ಸಲಹೆ ನೀಡಿದರು. ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಮತ್ತು ಅದಕ್ಕೆ ಪ್ರತಾಪ್ ಸಿಂಹ ಹಾಗೂ ಸಿ.ಟಿ. ರವಿ ನೀಡಿರುವ ತೀಕ್ಷ್ಣ ಪ್ರತಿಕ್ರಿಯೆಗಳು ರಾಜ್ಯ ರಾಜಕೀಯದಲ್ಲಿ ಹೊಸ ವಿವಾದ ಹಾಗೂ ಚರ್ಚೆಗೆ ಕಾರಣವಾಗಿವೆ.