Search


ನಾದಬ್ರಹ್ಮ ಹಂಸಲೇಖರಿಗೆ ಪದ್ಮ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಿ: ಅಭಿಯಾನ ಆರಂಭಿಸಿದ ಪ್ರೇಮ್

ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ, ಗೀತರಚನೆಕಾರ ಹಾಗೂ ಸಾಹಿತಿ ನಾದಬ್ರಹ್ಮ ಹಂಸಲೇಖ ಅವರಿಗೆ ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂಬ ಆಗ್ರಹ ಮತ್ತೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಟ ಹಾಗೂ ನಿರ್ದೇಶಕ 'ನೆನಪಿರಲಿ' ಪ್ರೇಮ್ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕ ಅಭಿಯಾನ ಆರಂಭಿಸಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಮನವಿ ಮಾಡಿರುವ ಪ್ರೇಮ್, ಹಂಸಲೇಖ ಅವರು ಕನ್ನಡ ಚಿತ್ರರಂಗ, ಸಾಹಿತ್ಯ ಹಾಗೂ ಸಂಸ್ಕೃತಿಗೆ ನೀಡಿರುವ ಅಪಾರ ಕೊಡುಗೆಯನ್ನು ರಾಷ್ಟ್ರ ಮಟ್ಟದಲ್ಲಿ ಗೌರವಿಸಬೇಕಾದ ಸಮಯ ಬಂದಿದೆ ಎಂದು ಹೇಳಿದ್ದಾರೆ. 

ಈ ಅಭಿಯಾನಕ್ಕೆ ಕನ್ನಡ ಚಿತ್ರರಂಗದ ಕಲಾವಿದರು, ಸಾಹಿತ್ಯಾಸಕ್ತರು, ಮಾಧ್ಯಮದವರು, ಕನ್ನಡಾಭಿಮಾನಿಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೆಂಬಲ ನೀಡುವಂತೆ ಅವರು ಮನವಿ ಮಾಡಿದ್ದಾರೆ. 300ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಿಗೆ ಸಂಗೀತ ಮತ್ತು ಸಾಹಿತ್ಯ ನೀಡಿರುವ ಹಂಸಲೇಖ ಅವರು, ಕನ್ನಡ ಚಿತ್ರರಂಗದ ಅತ್ಯಂತ ಅಪರೂಪದ ಸಾಧಕರಲ್ಲಿ ಒಬ್ಬರು. ಅವರ ಸಾಧನೆ ಕೇವಲ ಚಿತ್ರರಂಗಕ್ಕೆ ಸೀಮಿತವಾಗದೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲೂ ಮಹತ್ವದ ಪಾತ್ರ ವಹಿಸಿದೆ ಎಂದು ಪ್ರೇಮ್ ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದಲೇ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠದಂತಹ ಅತ್ಯುನ್ನತ ಗೌರವ ದೊರಕಬೇಕು ಎಂಬುದು ಪ್ರತಿಯೊಬ್ಬ ಕನ್ನಡಿಗನ ಒಗ್ಗಟ್ಟಿನ ಬೇಡಿಕೆಯಾಗಬೇಕು ಎಂದು ಅವರು ಕರೆ ನೀಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನವನ್ನು ಹೆಚ್ಚಿನ ಜನರಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ. 

ಹಂಸಲೇಖ ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಮಹತ್ವದ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1995ರಲ್ಲಿ 'ಪಂಚಾಕ್ಷರಿ ಗವಾಯಿ' ಚಿತ್ರದ ಸಂಗೀತಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದು, 'ಹಾಲುಂಡ ತವರು', 'ನೆನಪಿರಲಿ' ಹಾಗೂ 'ಪಂಚಾಕ್ಷರಿ ಗವಾಯಿ' ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿಗಳು ಲಭಿಸಿವೆ. ಇದರ ಜೊತೆಗೆ ಹಲವು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಎಸ್. ಜಾನಕಿ ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ. ಆದರೆ, ಇಷ್ಟೊಂದು ಸಾಧನೆ ಮಾಡಿದ್ದರೂ ಕೇಂದ್ರ ಸರ್ಕಾರದಿಂದ ನೀಡಲಾಗುವ ನಾಗರಿಕ ಗೌರವಗಳು ಇದುವರೆಗೆ ಅವರಿಗೆ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಪ್ರೇಮ್ ಆರಂಭಿಸಿರುವ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಹಂಸಲೇಖ ಅಭಿಮಾನಿಗಳು ಹಾಗೂ ಹಲವು ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸುತ್ತಿವೆ.

By Ravikumar - 19-07-2026


Ads in Post