ಪಾಟ್ನಾ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಿಜೆಪಿ (CJP) ಅಕ್ಟೋಬರ್ 10ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ. ಇದೇ ವೇಳೆ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ದೆಹಲಿಗೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಿರುವ ನಿರ್ಧಾರಕ್ಕೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಹರಿಯಾಣದ ಸೋನಿಪತ್ನ ಕುಂಡ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಚಿರಾಗ್ ಪಾಸ್ವಾನ್, ಭಾರತದ ಯುವಕರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಪ್ರತಿಭಟನಾಕಾರರನ್ನು ತಡೆಯುವ ಪ್ರಯತ್ನಗಳ ಕುರಿತು ಪ್ರಶ್ನಿಸಿದ ಅವರು, ಎಷ್ಟು ರೈಲುಗಳನ್ನು ತಡೆಯಲು ಸಾಧ್ಯ? ಎಷ್ಟು ಸಂಪರ್ಕ ವ್ಯವಸ್ಥೆಯನ್ನು ಸ್ಥಗಿತಗೊಳಿಸಬಹುದು? ಎಷ್ಟು ರಸ್ತೆಗಳನ್ನು ಬಂದ್ ಮಾಡಬಹುದು? ಎಂದು ಪ್ರಶ್ನಿಸಿದರು. ಇಂತಹ ಕ್ರಮಗಳಿಂದ ಯುವಕರನ್ನು ತಡೆಯಬಹುದು ಎಂಬುದು ತಪ್ಪು ಕಲ್ಪನೆ ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ಗುರುವಾರ ಮಾತನಾಡಿದ್ದ ಚಿರಾಗ್ ಪಾಸ್ವಾನ್, ಚುನಾವಣಾ ಪ್ರಕ್ರಿಯೆ ಕುರಿತು ರಾಜಕೀಯ ಪಕ್ಷಗಳಿಗೆ ಯಾವುದೇ ಆಕ್ಷೇಪಗಳಿದ್ದರೆ, ನಿರಂತರ ಪ್ರತಿಭಟನೆಗಳ ಬದಲಿಗೆ ಚುನಾವಣಾ ಆಯೋಗದೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದರು. ಯಾವುದೇ ಸಮಸ್ಯೆಯನ್ನು ಸಂವಾದದ ಮೂಲಕ ಪರಿಹರಿಸಿಕೊಳ್ಳುವುದು ಸೂಕ್ತ ಮಾರ್ಗ ಎಂದು ಅವರು ಪ್ರತಿಪಾದಿಸಿದ್ದರು.
ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)ದ ಅಧ್ಯಕ್ಷರೂ ಆಗಿರುವ ಚಿರಾಗ್ ಪಾಸ್ವಾನ್, ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರತಿಯೊಂದು ರಾಜಕೀಯ ಪಕ್ಷದ ಪ್ರಜಾಸತ್ತಾತ್ಮಕ ಹಕ್ಕು ಎಂದು ಒಪ್ಪಿಕೊಂಡರು. ಆದರೆ, ವಿರೋಧ ಪಕ್ಷಗಳು ನಿಜವಾಗಿಯೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಯಸುತ್ತಿವೆಯೇ ಅಥವಾ ರಾಜಕೀಯ ಗದ್ದಲ ಸೃಷ್ಟಿಸುವುದಷ್ಟೇ ಅವುಗಳ ಉದ್ದೇಶವೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು.
ಚುನಾವಣಾ ಆಯೋಗವು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದರೊಂದಿಗೆ ಸಂಪರ್ಕ ಸಾಧಿಸಲು, ಭೇಟಿಗೆ ಸಮಯ ಕೋರಲು ಹಾಗೂ ನಿಯೋಗದ ಮೂಲಕ ತಮ್ಮ ಅಹವಾಲುಗಳನ್ನು ಸಲ್ಲಿಸಲು ರಾಜಕೀಯ ಪಕ್ಷಗಳಿಗೆ ಅವಕಾಶವಿದೆ ಎಂದು ಚಿರಾಗ್ ಹೇಳಿದರು. ಹೀಗಾಗಿ, ನಿರಂತರ ಪ್ರತಿಭಟನೆ ನಡೆಸುವ ಬದಲು ಆಯೋಗದೊಂದಿಗೆ ಮಾತುಕತೆ ನಡೆಸಿ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಂತೆ ಅವರು ವಿರೋಧ ಪಕ್ಷಗಳಿಗೆ ಸಲಹೆ ನೀಡಿದರು.
ಅಸಮಾಧಾನವಿದ್ದರೆ ಪತ್ರಿಕಾಗೋಷ್ಠಿ ನಡೆಸಬಹುದು ಅಥವಾ ಪ್ರತಿಭಟನೆಯ ಮಾರ್ಗವನ್ನೂ ಅನುಸರಿಸಬಹುದು. ಆದರೆ, ಪ್ರತಿದಿನ ಪ್ರತಿಭಟನೆ ನಡೆಸುವುದು, ದೆಹಲಿಯ ರಸ್ತೆಗಳಲ್ಲಿ ಮಲಗುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಜವಾದ ಉದ್ದೇಶವನ್ನು ಪ್ರಶ್ನಿಸುವಂತೆ ಮಾಡುತ್ತದೆ ಎಂದು ಚಿರಾಗ್ ಪಾಸ್ವಾನ್ ಟೀಕಿಸಿದರು.