ಗಾಂಧಿನಗರ: ಉತ್ತರಾಖಂಡದ ಬಳಿಕ ದೇಶದಲ್ಲೇ ಎರಡನೇ ರಾಜ್ಯವಾಗಿ ಗುಜರಾತ್ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರಲು ಸಜ್ಜಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುಜರಾತ್ ಏಕರೂಪ ನಾಗರಿಕ ಸಂಹಿತೆ ಮಸೂದೆ, 2026ಕ್ಕೆ ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ನಿಯಮಾವಳಿಗಳ ಅಧಿಸೂಚನೆ ಹೊರಡಿಸಿದ ಬಳಿಕ ಕಾಯ್ದೆ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಪರಿಶಿಷ್ಟ ಪಂಗಡಗಳ (ST) ಸಮುದಾಯವನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಗುಜರಾತ್ ವಿಧಾನಸಭೆಯಲ್ಲಿ ಸುಮಾರು ಏಳು ಮುಕ್ಕಾಲು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಧ್ವನಿ ಮತದ ಮೂಲಕ ಮಸೂದೆಗೆ ಅನುಮೋದನೆ ನೀಡಲಾಗಿತ್ತು. ಮಸೂದೆ ಮಂಡನೆ ವೇಳೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸಾಮಾಜಿಕ ಸೌಹಾರ್ದತೆ, ರಾಷ್ಟ್ರೀಯ ಏಕತೆ ಹಾಗೂ ಸಮಾನತೆ ಸಾಧಿಸುವುದು UCCಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದರು. ಮಹಿಳೆಯರ ಹಕ್ಕುಗಳನ್ನು ಬಲಪಡಿಸುವಲ್ಲಿ UCC ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದ್ದರು. ಇದೇ ವೇಳೆ ಮಸೂದೆಯನ್ನು ಸದನ ಸಮಿತಿಗೆ ಕಳುಹಿಸುವಂತೆ ಒತ್ತಾಯಿಸಿದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದ್ದರು.
ಹೊಸ ಕಾಯ್ದೆಯಡಿ ಧರ್ಮದ ಭೇದವಿಲ್ಲದೆ ಮದುವೆ, ವಿಚ್ಛೇದನ, ಆಸ್ತಿ ಹಂಚಿಕೆ ಹಾಗೂ ಲಿವ್-ಇನ್ ಸಂಬಂಧಗಳಿಗೆ ಸಮಾನ ಕಾನೂನು ಚೌಕಟ್ಟು ಕಲ್ಪಿಸಲಾಗಿದೆ. ನಿಯಮಾವಳಿಗಳ ಅಧಿಸೂಚನೆ ಹೊರಬಂದ ನಂತರ ಈ ಕಾನೂನು ಜಾರಿಗೆ ಬರಲಿದ್ದು, ಗುಜರಾತ್ನಲ್ಲಿ ವಿವಿಧ ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದ ಹಲವು ವಿಷಯಗಳಿಗೆ ಏಕರೂಪದ ಕಾನೂನು ವ್ಯವಸ್ಥೆ ಅನ್ವಯವಾಗಲಿದೆ.