Search


RSS ಬಗ್ಗೆ ಪ್ರಿಯಾಂಕ್‌ ಖರ್ಗೆ ಕಿಡಿ: ನೆಹರು ಕೈಲೆ ಏನು ಮಾಡೋಕೆ ಆಗಿಲ್ಲ ಎಂದ ಕೋಟಾ ಶ್ರೀನಿವಾಸ್‌ ಪೂಜಾರಿ

ಬೆಂಗಳೂರು : ಪ್ರಿಯಾಂಕ್‌ ಖರ್ಗೆ ಅವರು ಗೃಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಆರ್‌ಎಸ್‌ಎಸ್‌ ಸಂಘಟನೆ ವಿರುದ್ದ ಕಿಡಕಾರಿದ್ದರು, ಈ ಕುರಿತು ಇದೀಗ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರತಿಕ್ರಿಯೆನೀಡಿದ್ದು. ʻನೆಹರು, ಇಂದಿರಾ ಗಾಂಧಿ ಕೈಯಲ್ಲೇ ಬ್ಯಾನ್‌ ಮಾಡಲು ಸಾಧ್ಯವಾಗಿಲ್ಲ, RSS ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ, ಇದನ್ನ ಪ್ರಿಯಾಂಕ್‌ ಖರ್ಗೆ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

RSS ವಿರುದ್ದ ಪೋಸ್ಟ್‌ ಹಾಕಿದ್ದ ಪ್ರಿಯಾಂಕ್‌...!

ಪ್ರಿಯಾಂಕ್​​ ಖರ್ಗೆ ಡಿ.ಕೆ. ಶಿವಕುಮಾರ್​​ ಅವರ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಬಿಜೆಪಿಯನ್ನು ಉದ್ದೇಶಿಸಿ ಎಕ್ಸ್​​ ಪೋಸ್ಟ್​​ ಮಾಡಿದ್ದರು, ಈ ಪೋಸ್ಟ್‌ನಲ್ಲಿ ಸಚಿವರು RSSಗೆ ಪರೋಕ್ಷ ಎಚ್ಚರಿಕೆ ನೀಡಿದ್ದರು. ಈ ಪೋಸ್ಟ್‌ನಲ್ಲಿ "ರಾಜ್ಯ ಬಿಜೆಪಿ ನಾಯಕರೇ ಏಕಿಷ್ಟು ಚಿಂತೆಗೊಳಗಾಗಿದ್ದೀರಿ? ಎಂದು ಪ್ರಶ್ನಿಸಿ ಜೂನ್​​ 7ರಂದು ಎಕ್ಸ್ ಪೋಸ್ಟ್​​​ ಮೂಲಕ  ಗೃಹ ಸಚಿವ ಪ್ರಿಯಾಂಕ್ ಖರ್ಗೆ​​ ಪ್ರಶ್ನೆ ಮಾಡಿದ್ದರು. 

"ನಾನು ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡು 48 ಗಂಟೆ ಕೂಡ ಆಗಿಲ್ಲ. ನಿಮ್ಮಲ್ಲಿನ ಭಯ, ಆತಂಕ, ನಿಮ್ಮಲ್ಲಿನ ದುಗುಡ ಎಲ್ಲವೂ ವ್ಯಕ್ತವಾಗುತ್ತಿದೆ. ಈಗಾಗಲೇ ಆರ್‌ಎಸ್‌ಎಸ್‌ನ್ನು ಬಳಸಿಕೊಂಡು ನನ್ನನ್ನು ನಿಂದಿಸುತ್ತಿದ್ದೀರಿ. ನನಗೆ ಜೀವ ಬೆದರಿಕೆ ಹಾಕುತ್ತಿದ್ದೀರಿ, ನೀವು ಮಾಡೋದನ್ನ ಮಾಡಿ. ಮುಖ್ಯವಾಗಿ, ನಿಮ್ಮ ‘ವ್ಯಕ್ತಿಗಳ ಸಂಘ’ಕ್ಕೆ ನನ್ನ ನಮಸ್ಕಾರವನ್ನೂ ತಿಳಿಸಿ. ನಿಮ್ಮ ರಾಜಕೀಯ ಮೇಲಧಿಕಾರದ ಸಂಘಟನೆಯ ನೋಂದಣಿಗಾಗಿ ದಾಖಲೆಗಳನ್ನು ಸಿದ್ಧವಾಗಿಡಲು ಹೇಳಿ" ಎಂದು ಬರೆದುಕೊಂಡಿದ್ದರು, ಇದೀಗ ಈ ಪೋಸ್ಟ್‌ ಬಿಜೆಪಿಗರನ್ನು ಕೆರಳಿಸಿದೆ.

ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಕಿಡಿ..!

ಕಾಂಗ್ರೆಸಿಗರ ಈ ಹೇಳಿಕೆಗಳಿಗೆ ಬಿಜೆಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಿಡಿ ಕಾರಿದ್ದು, "ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕದಲ್ಲಿ ಮಾತ್ರ ಅಲ್ಲ, ಭಾರತ ಸೇರಿ ವಿಶ್ವದ 50 ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಸಂಘದ ಹಿರಿಯರು ನೋಂದಣಿ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ನಾವು ಉತ್ತರ ಕೊಡುವ ಅಗತ್ಯವಿಲ್ಲ, ಸಂಘವೇ ಉತ್ತರ ನೀಡುತ್ತೆ. ಆರ್​ಎಸ್​ಎಸ್​ನ್ನು ಜವಾಹರಲಾಲ್ ನೆಹರು ಬ್ಯಾನ್ ಮಾಡಿದ್ದರು. ನಿಷೇಧಿಸಿದ ಬಳಿಕ ಗಣರಾಜೋತ್ಸವ ಪರೇಡ್​ನಲ್ಲಿ ಭಾಗಿಯಾಗಲು ಮನವಿ ಮಾಡಿದರು. ಇಂದಿರಾ ಗಾಂಧಿ ಬ್ಯಾನ್ ಮಾಡಲು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ ಎಂಬುದನ್ನು ಅವರು ಕಾಂಗ್ರೆಸಿಗರಿಗೆ ನೆನಪಿಸಿದ್ದಾರೆ.

ಸಿಎಂ ಶಿವಕುಮಾರ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗ್ತೇವೆ ಅಂತಾರೆ. ಆದರೆ ಅಪಪ್ರಚಾರ ಮಾಡುವ ವ್ಯಕ್ತಿಯನ್ನು ಗೃಹ ಮಂತ್ರಿ ಮಾಡಿದ್ದಾರೆ. ಆರ್‌ಎಸ್‌ಎಸ್​ಗೆ ಕಿರುಕುಳ ಕೊಡುವ ಬಗ್ಗೆ ಸಿಎಂ ಡಿಕೆಶಿ ಗಮನಹರಿಸಲಿ. ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಇತಿಮಿತಿಗಳಲ್ಲಿ ಕೆಲಸ ಮಾಡಬೇಕು. ಆರ್‌ಎಸ್‌ಎಸ್ ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ. ಇದನ್ನು ಪ್ರಿಯಾಂಕ್ ಖರ್ಗೆ ಅರ್ಥ ಮಾಡಿಕೊಳ್ಳುತ್ತಾರೆ ಅನ್ನೋದು ನನ್ನ ಭಾವನೆ ಎಂದವರು ತಿಳಿಸಿದ್ದಾರೆ.

By Ravikumar - 09-06-2026


Ads in Post