ನವದೆಹಲಿ: ಸಾರ್ವಜನಿಕ ಪರೀಕ್ಷೆಗಳ (ತಿದ್ದುಪಡಿ) ಮಸೂದೆ-2026 ಕುರಿತ ಲೋಕಸಭೆ ಚರ್ಚೆ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಹಾಗೂ ಬಿಜೆಪಿ ಸಂಸದ ಅನುರಾಗ್ ಠಾಕೂರ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದ ಸಮಿತಿಯ ಕುರಿತು ಮಾತನಾಡಿದ ಪ್ರಿಯಾಂಕಾ ಗಾಂಧಿ, ಸಮಿತಿಯ ಸದಸ್ಯರಾಗಿರುವ ಐಐಟಿ ಮದ್ರಾಸ್ ನಿರ್ದೇಶಕ ಡಾ. ವಿ. ಕಾಮಕೋಟಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ, "ಗೋಮೂತ್ರ ತಜ್ಞರಿಗೆ ಶಿಕ್ಷಣದ ಬಗ್ಗೆ ಏನು ಗೊತ್ತು?" ಎಂದು ಪ್ರಶ್ನಿಸಿದ್ದಾರೆ.
ಈ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅನುರಾಗ್ ಠಾಕೂರ್ ಕೂಡ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. "ಪ್ರಿಯಾಂಕಾ ಗಾಂಧಿ ರಾಹುಲ್ ಗಾಂಧಿಗಿಂತ ಉತ್ತಮ ಎಂದುಕೊಂಡಿದ್ದೆ. ಆದರೆ ಇಂದು ಅವರ ಮಾತು ಕೇಳಿದ ಬಳಿಕ ಇಬ್ಬರಲ್ಲೂ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಗೊತ್ತಾಯಿತು. ಐಐಟಿ ನಿರ್ದೇಶಕರ ಬಗ್ಗೆ ಇಂತಹ ಅವಹೇಳನಕಾರಿ ಮಾತುಗಳು ಸರಿಯಲ್ಲ" ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅನುರಾಗ್ ಠಾಕೂರ್ , "ಬಹುಶಃ ಅವರ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಯಾವುದನ್ನೋ ಸೇವಿಸುತ್ತಿರಬಹುದು. ಅದರ ಬದಲು ಗೋಮೂತ್ರ ಸೇವಿಸಿದ್ದರೆ ಉತ್ತಮವಾಗಿರುತ್ತಿತ್ತು" ಎಂದು ವ್ಯಂಗ್ಯವಾಡಿದರು. ಜೊತೆಗೆ, ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಅರಿಯಲು ಆರ್ಎಸ್ಎಸ್ಗೆ ಸೇರಬೇಕು ಎಂದೂ ಸಲಹೆ ನೀಡಿದರು. ಈ ಹೇಳಿಕೆಗಳ ಬಳಿಕ ಲೋಕಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಶಿಕ್ಷಣ ಸುಧಾರಣೆ ಕುರಿತ ಚರ್ಚೆ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ತಿರುಗಿ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.