ಇಂದೋರ್: ಪ್ರಶ್ನೆಗಳನ್ನು ಕೇಳುವ ವಿದ್ಯಾರ್ಥಿಗಳು ಹಾಗೂ ಯಾವುದೇ ವಿಚಾರವನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವ ‘ಅಂಧಭಕ್ತರು’ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಮಧ್ಯಪ್ರದೇಶದ ಇಂದೋರ್ನಲ್ಲಿ ಶನಿವಾರ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ವಿದ್ಯಾರ್ಥಿಗಳು ವ್ಯವಸ್ಥೆಯನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
“ಇದು ವ್ಯವಸ್ಥೆಯ ವಿರುದ್ಧದ ಹೋರಾಟ. ಪ್ರಶ್ನೆ ಕೇಳುವ ವಿದ್ಯಾರ್ಥಿಗಳಿಂದ ವ್ಯವಸ್ಥೆ ಬೆದರಿಕೆಯನ್ನು ಅನುಭವಿಸುತ್ತದೆ. ಏಕೆಂದರೆ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ದೇಶದ ವಿವಿಧ ಸಂಸ್ಥೆಗಳು ಮತ್ತು ಆಡಳಿತ ವ್ಯವಸ್ಥೆಯ ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನು ಎತ್ತಬೇಕು. ಅಮಿತ್ ಶಾ ಅವರ ಪುತ್ರ ಜಯ್ ಶಾ ಕ್ರಿಕೆಟ್ ಆಡಳಿತ ಸಂಸ್ಥೆಯ ಅಧ್ಯಕ್ಷರಾಗಿರುವುದು ಹೇಗೆ, ಕೆಲವೇ ವ್ಯಕ್ತಿಗಳು ದೇಶದ ಉದ್ಯಮ ವಲಯದ ಮೇಲೆ ಪ್ರಭಾವ ಸಾಧಿಸಿರುವುದು ಹೇಗೆ, ನ್ಯಾಯಾಂಗ ಮತ್ತು ಇತರ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿವೆಯೇ ಹಾಗೂ ಚುನಾವಣಾ ಆಯೋಗ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳುತ್ತಾರೆ ಎಂದು ಅವರು ಉಲ್ಲೇಖಿಸಿದರು.
ವಿದ್ಯಾರ್ಥಿ ಕುತೂಹಲದಿಂದ ಪ್ರಶ್ನೆಗಳನ್ನು ಕೇಳುತ್ತಾನೆ, ಆದರೆ ‘ಅಂಧಭಕ್ತ’ ಪ್ರಶ್ನಿಸುವ ಬದಲು ತನ್ನದೇ ಭ್ರಮೆಯ ಲೋಕದಲ್ಲಿ ಬದುಕುತ್ತಾನೆ. “ವ್ಯವಸ್ಥೆಗೆ ವಿದ್ಯಾರ್ಥಿಗಳು ಬೇಡ, ಅಂಧಭಕ್ತರು ಬೇಕು” ಎಂದು ಅವರು ಟೀಕಿಸಿದರು. ವಿದ್ಯಾರ್ಥಿ ನಿರ್ಭೀತನಾಗಿರುತ್ತಾನೆ, ಆದರೆ ಅಂಧಭಕ್ತ ಭಯದಿಂದ ಪ್ರಶ್ನೆಗಳನ್ನು ತಪ್ಪಿಸುತ್ತಾನೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆಯೂ ರಾಹುಲ್ ಗಾಂಧಿ ಪ್ರಸ್ತಾಪಿಸಿದರು. ಶಾಲಾ-ಕಾಲೇಜುಗಳ ಮೂಲಸೌಕರ್ಯ ಹದಗೆಡುತ್ತಿರುವುದಕ್ಕೆ ಕಾರಣವೇನು, ಶಿಕ್ಷಣ ಸಂಸ್ಥೆಗಳ ಸ್ಥಿತಿ ಏಕೆ ಕುಸಿಯುತ್ತಿದೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗಳು ಏಕೆ ನಡೆಯುತ್ತಿವೆ ಎಂಬುದರ ಕುರಿತು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಎತ್ತಬೇಕು ಎಂದು ಅವರು ಹೇಳಿದರು. ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಅವುಗಳ ಕುರಿತು ಉತ್ತರಗಳನ್ನು ಕೇಳಲು ವಿದ್ಯಾರ್ಥಿಗಳು ಧೈರ್ಯದಿಂದ ಮುಂದೆ ಬರಬೇಕು ಎಂದು ಕರೆ ನೀಡಿದರು.