Search


ಇಸ್ಲಾಂ ಧರ್ಮ ಶ್ರೇಷ್ಠ ಎಂದ ರಾಯರೆಡ್ಡಿ ವಿರುದ್ಧ ಬಿಜೆಪಿ ಆಕ್ರೋಶ; ಹಿಂದುಗಳಿಗೆ ಸುನ್ನತ್ ಗ್ಯಾರಂಟಿ

ಬೆಂಗಳೂರು: ಇಸ್ಲಾಂ ಧರ್ಮವೇ ಶ್ರೇಷ್ಠ ಧರ್ಮ ಎಂದು ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಮುಸ್ಲಿಂ ಸಮಾಜದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಸಚಿವರು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಟ್ವಿಟ್ ಮಾಡಿ ಆಕ್ರೋಶ ಹೊರಹಾಕಿರುವ ವಿಪಕ್ಷ ನಾಯಕ ಆರ್. ಅಶೋಕ್ 'ಡಿಕೆ ಸರ್ಕಾರದಿಂದ ಹಿಂದುಗಳಿಗೆ ಸುನ್ನತ್ ಗ್ಯಾರಂಟಿ' ಎಂದು ಲೇವಡಿ ಮಾಡಿದ್ದಾರೆ 

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಯರೆಡ್ಡಿ, ಇಸ್ಲಾಂ ಧರ್ಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ತಾವು ಹಜ್ ಯಾತ್ರೆಗೆ ತೆರಳುವ ಆಸೆಯನ್ನು ಹೊಂದಿರುವುದಾಗಿಯೂ ಹೇಳಿಕೊಂಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಚಿವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ನಾಯಕರು, ಹಿಂದೂ ಧರ್ಮದ ಬಗ್ಗೆ ಸಚಿವರು ಇದೇ ರೀತಿಯ ಹೇಳಿಕೆ ನೀಡಬಹುದೇ ಎಂದು ಪ್ರಶ್ನಿಸಿದ್ದಾರೆ.

ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಚಿವ ರಾಯರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೂಗಳ ಮತ ಪಡೆದು ಅಧಿಕಾರಕ್ಕೆ ಬಂದಿರುವ ಸರ್ಕಾರದ ಸಚಿವರು ಒಂದು ಧರ್ಮವನ್ನು ಶ್ರೇಷ್ಠವೆಂದು ಬಣ್ಣಿಸುವುದು ಸರಿಯೇ ಎಂದು ಪ್ರಶ್ನಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ರಾಯರೆಡ್ಡಿ ಅವರ ಹೇಳಿಕೆಯನ್ನು ಹಿಂದೂ ಸಮಾಜದ ವಿರುದ್ಧದ ಹೇಳಿಕೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದು, ಅವರು ಹಿಂದೂ ಸಮಾಜದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆದರೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರಾಯರೆಡ್ಡಿ, ತಾವು ಯಾವುದೇ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೋಟ್ಯಂತರ ಹಿಂದೂಗಳು ಸೇರಿದಂತೆ ವಿವಿಧ ಧರ್ಮಗಳ ಜನರು ತಮ್ಮನ್ನು ಬೆಂಬಲಿಸಿದ್ದಾರೆ. ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ವಿಷಾದವಿದೆ ಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಚಿವರ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಧರ್ಮಾಧಾರಿತ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್‌-ಬಿಜೆಪಿ ನಡುವೆ ವಾಗ್ವಾದ ತೀವ್ರಗೊಂಡಿದೆ.

By Ravikumar - 31-08-2026


Ads in Post