ಬೆಂಗಳೂರು: ದೇಶದಲ್ಲಿ ಬಿಜೆಪಿ ಸೃಷ್ಟಿಸಿದೆ ಎನ್ನಲಾದ ಕೋಮು ದ್ವೇಷ, ಹಿಂಸಾಚಾರ ಮತ್ತು ದೌರ್ಜನ್ಯಗಳ ವಿರುದ್ಧ ಜನರಲ್ಲಿ ಆತ್ಮಸ್ಥೈರ್ಯ ತುಂಬಿ ಸೌಹಾರ್ದತೆ ಮೂಡಿಸುವ ಉದ್ದೇಶದಿಂದ ರಾಹುಲ್ ಗಾಂಧಿ ಅವರು ‘ಭಾರತ ಜೋಡೋ ಯಾತ್ರೆ’ ನಡೆಸಿದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಭಾರತ ಜೋಡೋ ಯಾತ್ರೆಯ 5ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾದಾಗ ಯಾರೂ ಧ್ವನಿ ಎತ್ತದ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಂತ್ರಸ್ತರ ಪರವಾಗಿ ನಿಂತರು. ರೋಹಿತ್ ವೇಮುಲ ಕುಟುಂಬಕ್ಕೆ ಧೈರ್ಯ ತುಂಬುವುದರಿಂದ ಹಿಡಿದು ಬಿಲ್ಕಿಸ್ ಬಾನು ಪ್ರಕರಣದವರೆಗೆ ಅವರು ನ್ಯಾಯದ ಪರವಾಗಿ ಹೋರಾಡಿದ್ದಾರೆ ಎಂದರು.
ರಾಜಕೀಯ ಲಾಭಕ್ಕಾಗಿ ರಾಹುಲ್ ಗಾಂಧಿ ಪಾದಯಾತ್ರೆ ಮಾಡುವ ಅಗತ್ಯವಿರಲಿಲ್ಲ. ಆದರೂ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಮಣಿಪುರದಿಂದ ಮುಂಬೈವರೆಗೆ ಸುಮಾರು 10,000 ಕಿ.ಮೀ. ನಡೆದು ದೇಶದಲ್ಲಿ ಐಕ್ಯತೆ ಮತ್ತು ಸೌಹಾರ್ದತೆಯ ಸಂದೇಶ ಸಾರಿದರು. ಮಹಾತ್ಮಾ ಗಾಂಧಿಯವರ ದಂಡಿ ಯಾತ್ರೆಯ ಮಾದರಿಯಲ್ಲಿ ಇತಿಹಾಸ ನಿರ್ಮಿಸಿದರು ಎಂದು ಹರಿಪ್ರಸಾದ್ ಹೇಳಿದರು.
ಕರ್ನಾಟಕದಲ್ಲಿ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಬೇಕು ಎಂಬ ಉದ್ದೇಶದಿಂದ ಜನರು ಕಾಂಗ್ರೆಸ್ಗೆ ಅಧಿಕಾರ ನೀಡಿದ್ದಾರೆ. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವ ಭರವಸೆ ನೀಡಿದ್ದೇವೆ. ಕೋಮು ದ್ವೇಷ ಹರಡುವ ಪ್ರಯತ್ನಗಳನ್ನು ತಡೆದು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವುದು ನಮ್ಮ ಪ್ರಮುಖ ಸಾಧನೆಗಳಾಗಿವೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದ್ವೇಷದ ರಾಜಕಾರಣವನ್ನು ಇನ್ನೂ ನಿಲ್ಲಿಸಿಲ್ಲ ಎಂದು ಆರೋಪಿಸಿದ ಹರಿಪ್ರಸಾದ್, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿದ್ಯಾರ್ಥಿಗಳ ಸಮಸ್ಯೆಗಳ ವಿರುದ್ಧ ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಗಟ್ಟಿಯಾಗಿ ಹೋರಾಡಬೇಕು ಎಂದು ಕರೆ ನೀಡಿದರು. ಜೆನ್ ಝಡ್ ವಿದ್ಯಾರ್ಥಿಗಳು ಮೋದಿ ಮತ್ತು ಅಮಿತ್ ಶಾ ಅವರನ್ನು ಮಂಡಿಯೂರುವಂತೆ ಮಾಡಿದ್ದಾರೆ ಎಂದು ಹೇಳಿದ ಅವರು, ‘56 ಇಂಚಿನ ಎದೆ’ ಎಂದು ಹೇಳಿಕೊಳ್ಳುವವರು ಜನರನ್ನು ಎದುರಿಸಲು ಸಾಧ್ಯವಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.