ಬೆಂಗಳೂರು/ಯಾದಗಿರಿ ; ಮುಂಜಾನೆಯಿಂದ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ವರುಣ ಅಬ್ಬರಿಸಿದ್ದಾನೆ. ನಗರದ ಕಾರ್ಪೊರೇಷನ್, ವಿಧಾನಸೌಧ, ಲಾಲ್ಬಾಗ್, ಜಯನಗರ, ಶಾಂತಿನಗರ, ವಿಜಯನಗರ, ಶಿವಾನಂದ ಸರ್ಕಲ್, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಹಲವರು ಮಳೆಯಿಂದ ತಪ್ಪಿಸಿಕೊಳ್ಳಲು ಆಶ್ರಯ ಪಡೆದರೆ, ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ಸಂಚರಿಸುತ್ತಿರುವ ದೃಶ್ಯಗಳು ಕಂಡುಬಂದವು.
ಯಾದಗಿರಿಯಲ್ಲೂ ವರುಣನ ಅಬ್ಬರ:
ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಂದು ಗಂಟೆಗೂ ಅಧಿಕ ಕಾಲ ಭರ್ಜರಿ ಮಳೆಯಾಗಿದೆ. ಹಲವು ದಿನಗಳಿಂದ ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜನರಿಗೆ ಮಳೆಯ ಆಗಮನ ಕೊಂಚ ನೆಮ್ಮದಿ ತಂದಿದೆ. ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳ ಬಗ್ಗೆ ಆತಂಕದಲ್ಲಿದ್ದ ರೈತರಿಗೆ ಇದೀಗ ಸುರಿದ ಮಳೆ ನಿರಾಳತೆ ನೀಡಿದೆ. ಮಳೆ ಮುಂದುವರಿದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ರೈತರಲ್ಲಿ ಮೂಡಿದೆ.
ಹನೂರಿನಲ್ಲಿ ಭಾರೀ ಮಳೆಗೆ ಅಪಾರ ಹಾನಿ:
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದ್ದು, ಹಲವು ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ. ಬಂಡೆಪಾಳ್ಯ ಗ್ರಾಮದಲ್ಲಿ ಕೊಟ್ಟಿಗೆ ಕುಸಿದು ಒಂದು ಹಸು ಸ್ಥಳದಲ್ಲೇ ಮೃತಪಟ್ಟಿದ್ದು, ಮೂರು ಹಸುಗಳು ಗಂಭೀರವಾಗಿ ಗಾಯಗೊಂಡಿವೆ. ರಾಮಾಪುರ ಗ್ರಾಮದಲ್ಲಿ ಮುಖ್ಯ ರಸ್ತೆಗೆ ಬೃಹತ್ ಮರವೊಂದು ಉರುಳಿಬಿದ್ದ ಪರಿಣಾಮ ರಾಮಾಪುರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಲೊಕ್ಕನಹಳ್ಳಿ ಗ್ರಾಮದಲ್ಲಿ ಮಳೆಯ ನೀರು 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ್ದು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ದಿನಸಿ ಸಾಮಗ್ರಿಗಳಿಗೆ ಹಾನಿಯಾಗಿದೆ. ಇದಲ್ಲದೆ, ಸಾವಿರಕ್ಕೂ ಅಧಿಕ ಬಾಳೆ ಗಿಡಗಳು ಹಾನಿಗೊಳಗಾಗಿವೆ. ಕಟಾವಿಗೆ ಸಿದ್ಧವಾಗಿದ್ದ ಬಾಳೆ ಬೆಳೆ ನೆಲಕ್ಕುರುಳಿದ ಪರಿಣಾಮ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸ್ಥಳೀಯ ಅಧಿಕಾರಿಗಳು ಹಾನಿಯ ಕುರಿತು ಮಾಹಿತಿ ಸಂಗ್ರಹಿಸಿ, ನಷ್ಟದ ಅಂದಾಜು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.