ಮುಂಬೈ: ಗ್ರಾಹಕರು ಆರ್ಡರ್ ಮಾಡಿದ್ದ ಮಸಾಲೆ ದೋಸೆಯಲ್ಲಿ ಸಣ್ಣ ಇಲಿ ಪತ್ತೆಯಾದ ಘಟನೆ ಮುಂಬೈನಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೊರಿವಲಿ ಪಶ್ಚಿಮದಲ್ಲಿರುವ ರಾಧಾಕೃಷ್ಣ ಹೋಟೆಲ್ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ತಕ್ಷಣ ಕ್ರಮ ಕೈಗೊಂಡಿದೆ.
ಅಮಿತ್ ತ್ರಿವೇದಿ ಎಂಬವರು ತಮ್ಮ ಮಗ ಹಾಗೂ ಇಬ್ಬರು ಸಹೋದರರೊಂದಿಗೆ ಹೋಟೆಲ್ಗೆ ತೆರಳಿ ದಕ್ಷಿಣ ಭಾರತದ ಉಪಾಹಾರ ಸೇವಿಸಿದ್ದರು. ಈ ವೇಳೆ ಮಸಾಲೆ ದೋಸೆ ಆರ್ಡರ್ ಮಾಡಿದ್ದು, ಒಂದೆರಡು ತುತ್ತು ತಿಂದ ಬಳಿಕ ದೋಸೆಯೊಳಗೆ ಸಣ್ಣ ಇಲಿ ಇರುವುದನ್ನು ಗಮನಿಸಿದ್ದಾರೆ. ದೃಶ್ಯ ಕಂಡು ಆಘಾತಕ್ಕೊಳಗಾದ ತ್ರಿವೇದಿ ಸ್ಥಳದಲ್ಲೇ ವಾಂತಿ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಕುರಿತು ತ್ರಿವೇದಿ ಅವರು ಬೊರಿವಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣದ ಮಾಹಿತಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ರವಾನಿಸಿದ್ದಾರೆ. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ FDA ಅಧಿಕಾರಿಗಳ ತಂಡ ಹೋಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಅಡುಗೆಮನೆಯ ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಗಂಭೀರ ಲೋಪಗಳು ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಶೀಲನೆಯ ಬಳಿಕ ರಾಧಾಕೃಷ್ಣ ಹೋಟೆಲ್ನ ಆಹಾರ ವ್ಯವಹಾರಕ್ಕೆ ಸಂಬಂಧಿಸಿದ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಹೋಟೆಲ್ನಿಂದ ಸಂಗ್ರಹಿಸಲಾದ ಆಹಾರ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಆಹಾರ ಪದಾರ್ಥಗಳಲ್ಲಿ ಇಲಿ, ಜಿರಳೆ ಸೇರಿದಂತೆ ಹಾನಿಕಾರಕ ಕೀಟಗಳು ಪತ್ತೆಯಾಗುವುದು ಆಹಾರ ಸುರಕ್ಷತಾ ನಿಯಮಗಳ ಗಂಭೀರ ಉಲ್ಲಂಘನೆಯಾಗಬಹುದು. ಇಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ಆಹಾರ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ, ದಂಡ ಸೇರಿದಂತೆ ವಿವಿಧ ಶಿಕ್ಷೆಗಳಿಗೆ ಅವಕಾಶವಿದೆ. ಈ ನಡುವೆ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಕುರಿತು ಮಹಾರಾಷ್ಟ್ರ FDA ತಪಾಸಣೆ ಮತ್ತು ಕಾರ್ಯಾಚರಣೆಗಳನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.