Search


ಸಿಎಂ ಡಿಕೆ ಶಿವಕುಮಾರ್ ಆಪ್ತ ರವಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಪಟ್ಟ; K.N ರಾಜಣ್ಣಗೆ ನಿರಾಸೆ

ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಎಸ್. ರವಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶರಣಗೌಡ ಪಾಟೀಲ್ (ಬಯ್ಯಾಪುರ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಗೆ ತೆರೆ ಬಿದ್ದಿದೆ.

ಅಪೆಕ್ಸ್ ಬ್ಯಾಂಕ್‌ಗೆ ನಾಲ್ಕು ತಿಂಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಉಂಟಾದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು. ಅಂತಿಮವಾಗಿ ಎಸ್. ರವಿ ಹಾಗೂ ಸಿದ್ದರಾಮಯ್ಯ ಅವರ ಆಪ್ತರೆಂದು ಹೇಳಲಾಗುವ ಕೆ.ಎನ್. ರಾಜಣ್ಣ ನಡುವೆ ಪೈಪೋಟಿ ತೀವ್ರಗೊಂಡಿತ್ತು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರು ಹಾಗೂ ಬ್ಯಾಂಕ್‌ನ ನಿರ್ದೇಶಕರು ಭಾಗವಹಿಸಿದ್ದರು. ಚರ್ಚೆಯ ಬಳಿಕ ಮೊದಲ ಎರಡೂವರೆ ವರ್ಷಗಳ ಅವಧಿಗೆ ಎಸ್. ರವಿ ಅವರನ್ನು ಅಧ್ಯಕ್ಷರಾಗಿ ಹಾಗೂ ಶರಣಗೌಡ ಪಾಟೀಲ್ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ರವಿ ಆಯ್ಕೆಯಿಂದ ಶಿವಕುಮಾರ್ ಬಣಕ್ಕೆ ಮೇಲುಗೈ ಸಿಕ್ಕಂತಾಗಿದೆ.

ಅಧ್ಯಕ್ಷ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕೆ.ಎನ್. ರಾಜಣ್ಣ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಸ್ಥಾನಕ್ಕಾಗಿ ಹಿರಿಯ ನಾಯಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರೂ, ಅಂತಿಮವಾಗಿ ರವಿ ಪರ ನಿರ್ಧಾರವಾಗಿದೆ. ಅಪೆಕ್ಸ್ ಬ್ಯಾಂಕ್‌ನಲ್ಲಿ ಒಮ್ಮತದ ಆಯ್ಕೆ ಮಾಡುವ ಪರಂಪರೆಯನ್ನು ಮುಂದುವರಿಸಲಾಗಿದ್ದು, ಎರಡೂವರೆ ವರ್ಷಗಳ ಬಳಿಕ ಅಧ್ಯಕ್ಷ-ಉಪಾಧ್ಯಕ್ಷರು ರಾಜೀನಾಮೆ ನೀಡಿ ಇತರರಿಗೆ ಅವಕಾಶ ಕಲ್ಪಿಸಬೇಕು ಎಂದು ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

By Ravikumar - 10-09-2026


Ads in Post