ಅಹಮದ್ಬಾದ್: ಐಪಿಎಲ್ 2026 (IPL) ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯವಾಗಿದ್ದು. ಟಾಸ್ ಸೋತು ಬ್ಯಾಟ್ ಬೀಸಿದ ಗುಜರಾತ್ ತಂಡ 8 ವಿಕೆಟ್ ನಷ್ಟಕ್ಕೆ 154 ರನ್ ಪೇರಿಸಿದೆ. ಆರ್ಸಿಬಿ (RCB)ಬೌಲರ್ಗಳ ಸಂಘಟಿತ ಪ್ರದರ್ಶನದಿಂದಾಗಿ ಗುಜರಾತ್ (GT) ಅಲ್ಪ ಮೊತ್ತಕ್ಕೆ ಕುಸಿತ ಕಂಡಿದ್ದು, ಟ್ರೋಫಿ ಎತ್ತಿ ಹಿಡಿಯಲು ಆರ್ಸಿಬಿಗೆ 155 ರನ್ಗಳ ಅವಶ್ಯಕತೆ ಇದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಇಳಿದ ಗುಜರಾತ್ ತಂಡದ ಆರಂಭಿಕ ಬ್ಯಾಟ್ಸ್ಮೆನ್ಗಳು ಬೃಹತ್ ಮೊತ್ತವನ್ನ ಪೇರಿಸುವ ನಿಟ್ಟಿನಲ್ಲಿ ಬಿರುಸಿನ ಆಟವನ್ನೇ ಆರಂಭಿಸಿದರು. ಆದರೆ 3ನೇ ಓವರ್ನಲ್ಲಿ ಹೇಜಲ್ವುಡ್ ಬೌಲಿಂಗ್ನಲ್ಲಿ ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ (10) ರಜತ್ ಪಾಟಿದಾರ್ಗೆ ಕ್ಯಾಚ್ ಒಪ್ಪಿಸಿದರು. ಇದರ ಬೆನ್ನಲ್ಲೇ 4ನೇ ಓವರ್ನಲ್ಲಿ ಭುವನೇಶ್ವರ್ ಎಸೆದ ಬೌನ್ಸರ್ಗೆ ಸಾಯಿ ಸುದರ್ಶನ್(12) ಕೂಡ ವಿಕೆಟ್ ಒಪ್ಪಿಸಿದರು. ಆರಂಭಿಕ ಆಘಾತ ಅನುಭವಿಸಿದ ಗುಜರಾತ್ ತಂಡ ನಿಧಾನಗತಿಯ ಆಟಕ್ಕೆ ಮೊರೆ ಹೋಯಿತು.
ನಂತರ ಬೆಂಗಳೂರು ತಂಡದ ಸಂಘಟಿತ ಪ್ರದರ್ಶನಕ್ಕೆ ತತ್ತರಿಸಿದ ಗುಜರಾತ್ ಆಟಗಾರರು ವಿಕೆಟ್ ಒಪ್ಪಿಸುತ್ತಾ ಹೋದರು, ನಿಶಾಂತ್ ಸಿಂಧು (20), ಜೋಶ್ ಬಟ್ಲರ್ (19), ಅರ್ಷದ್ ಖಾನ್ (15), ರಾಹುಲ್ ತೇವಾಟಿಯಾ (7), ಜೇಸನ್ ಹೋಲ್ಡರ್ (7), ರಶೀದ್ ಖಾನ್ (7) ರನ್ ಗಳಿಸಿ ಔಟಾದರು. ಆದರೆ ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಗುಜರಾತ್ ತಂಡಕ್ಕೆ ಆಸರೆಯಾಗಿ ನಿಂತ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 37 ಎಸೆತಗಳಲ್ಲಿ 50 ರನ್ ಗಳಿಸಿ, ಗುಜರಾತ್ ಸ್ಕೋರ್ ಬೋರ್ಡ್ಗೆ ಬಲ ತುಂಬಿದರು.
ಇನ್ನು ಬೌಲಿಂಗ್ನಲ್ಲಿ ಆರ್ಸಿಬಿಯ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ರಸಿಕ್ ಸಲಾಂದಾರ್ 3, ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್ವುಡ್ ತಲಾ 2 ವಿಕೆಟ್ ಪಡೆದರೆ ಕೃನಾಲ್ ಪಾಂಡ್ಯ 1 ವಿಕೆಟ್ ಪಡೆದು ಮಿಂಚಿದರು.