Search


‘ಜೈಲಿಗೆ ಹೋಗಲು ಸಿದ್ಧ’.. ರೈತರ ಹೋರಾಟಕ್ಕೆ ದೇವೇಗೌಡರ ಬೆಂಬಲದ ಭರವಸೆ

ರಾಮನಗರ: ಬಿಡದಿ ಹೋಬಳಿಯ ಭೈರಮಂಗಲ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಎ. ಮಂಜುನಾಥ್ ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಈ ವೇಳೆ ಪ್ರತಿಭಟನಾ ಸ್ಥಳದಲ್ಲಿದ್ದ ರೈತ ಮಹಿಳೆಯರು ಹಾಗೂ ರೈತ ಮುಖಂಡರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿದರು. ‘ದೇವೇಗೌಡರು ಬರಲೇಬೇಕು’ ಎಂದು ಘೋಷಣೆ ಕೂಗಿ, ತಮ್ಮ ಹೋರಾಟಕ್ಕೆ ದೇವೇಗೌಡರ ಬೆಂಬಲ ನೀಡಬೇಕೆಂದು ಪಟ್ಟು ಹಿಡಿದರು.

ರೈತರ ಒತ್ತಾಯಕ್ಕೆ ತಕ್ಷಣ ಸ್ಪಂದಿಸಿದ ನಿಖಿಲ್ ಕುಮಾರಸ್ವಾಮಿ, ಸ್ಥಳದಲ್ಲೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ವಿಡಿಯೋ ಕಾಲ್ ಮಾಡಿ ರೈತರೊಂದಿಗೆ ಮಾತನಾಡಿಸಿದರು. ವಿಡಿಯೋ ಕಾಲ್ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ತೀವ್ರ ಹಲ್ಲುನೋವು ಇರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಪ್ರತಿಭಟನಾ ಸ್ಥಳಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಆದರೆ ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಹಾಗೂ ತಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದು ಧೈರ್ಯ ತುಂಬಿದರು.

ರೈತರ ಹಕ್ಕುಗಳಿಗಾಗಿ ಯಾವುದೇ ಹಂತಕ್ಕೂ ಹೋಗಲು ಸಿದ್ಧನಿದ್ದೇನೆ ಎಂದು ದೇವೇಗೌಡರು ಹೇಳಿದರು. ಪ್ರಾಣ ಹೋದರೂ ರೈತರನ್ನು ಬಿಟ್ಟುಕೊಡುವುದಿಲ್ಲ, ನಮ್ಮ ಕುಟುಂಬ ಮೊದಲಿನಿಂದಲೂ ರೈತರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು. ಅಗತ್ಯಬಿದ್ದರೆ ರೈತರ ಪರವಾಗಿ ವಿಧಾನಸೌಧದ ಮುಂದೆ ಧರಣಿ ನಡೆಸಲು ಸಿದ್ಧವಿದ್ದು, ಜೈಲಿಗೆ ಹೋಗಲು ಕೂಡ ಸಿದ್ಧ ಎಂದು ದೇವೇಗೌಡರು ಭರವಸೆ ನೀಡಿದರು. ಈ ಮೂಲಕ ಭೈರಮಂಗಲ ರೈತರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂಬ ಸಂದೇಶ ನೀಡಿದರು.

By Ravikumar - 26-09-2026


Ads in Post