ಜೀವನದಲ್ಲಿ ಸಾಧಿಸಲಾಗದ್ದನ್ನು ಸಾಧಿಸಿ, ಸಾಧನೆಯ ಸಂತೋಷ ತನ್ನವರೊಂದಿಗೆ ಹಂಚಿಕೊಳ್ಳಲು ತನ್ನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದ ಕನಕಪುರದ ಬಂಡೆಗೆ ಪಕ್ಕದ ಜಯನಗರದ ರಾಮಲಿಂಗ ರೆಡ್ಡಿ ಡೈನಮೈಟ್ ಎಸೆದಿದ್ದಾರೆ.
ಸೌಮ್ಯ ಸ್ವಭಾವದವರೆಂದು, ಹಗರಣಗಳಲ್ಲಿ ಸಿಲುಕಿಹಾಕಿಕೊಳ್ಳದ ಚಾಣಾಕ್ಷ ರಾಜಕಾರಣಿಯಂದು ಹೆಸರಾದ, ಸ್ವಲ್ಪ ಸ್ವಚ್ಛವೆಂದೇ ಬಿಂಬಿತವಾದ ಜಯನಗರದ ಜಯಶೀಲ ರಾಮಲಿಂಗಾ ರೆಡ್ಡಿಯವರು ಖಾತೆ ಕ್ಯಾತೆ ತೆಗೆದು ಸಚಿವ ಸಂಪುಟಕ್ಕೆ ರಾಜಿನಾಮೆ ಎಂಬ ಡೈನಮೈಟ್ ನ್ನು ಕನಕಪುರದ ಬಂಡೆಯ ಮೇಲೆ ಎಸೆದಿದ್ದಾರೆ.
ಒಂದು ಕಡೆ ಹತ್ತಿದ ಬೆಂಕಿ ಚಾಚದೆ ಇರುವುದೆ? ಇದು ಕೊಲಾರದ ವರೆಗೆ ಹಬ್ಬಿದಾಗ, ಅಲ್ಲಿಯ ಹಿರಿಯ ದಲಿತ ನಾಯಕರಾದ ಕೆ. ಎಚ್. ಮುನಿಯಪ್ಪನವರು ಕೂಡ ತಮ್ಮಿದಿಷ್ಟು ಕಾಣಿಕೆ ಇರಲೆಂದು ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಇದು ಮಂತ್ರಿಗಳಾಗಿ ಖಾತೆಯ ಕ್ಯಾತೆಯಾದರೆ ಎನ್ನುವವರ ಕಥೆಯಾದರೆ ಮಂತ್ರಿಪದವಿಯೇ ಸಿಗದೇ ಹೋದವರ ಕಥೆ ಇನ್ನಷ್ಟು ರೋಚಕವಾಗಿದೆ.
ಗದುಗಿನಿಂದ ಏಳುಬಾರಿ ಶಾಸಕರಾಗಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಮಂತ್ರಿಯಾಗಿ, "ಇನ್ನೇನು ಮುಖ್ಯಮಂತ್ರಿಯ ಹುದ್ದೆ ಮಾತ್ರ ಬಾಕಿ" ಎಂದಿದ್ದ ಹಿರಿಯ ನಾಯಕ ಎಚ್.ಕೆ. ಪಾಟೀಲರನ್ನು ಸಚಿವ ಸಂಪುಟಕ್ಕೆ ಪರಿಗಣಿಸದಿರುವುದು ಕರ್ನಾಟಕ ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು.
ಹಳಿಯಾಳದಿಂದ ಒಂಬತ್ತು ಬಾರಿ ಶಾಸಕರಾಗಿ, "ಪಕ್ಷ ಯಾವುದೇ ಇರಲಿ, ಸರಕಾರ ಯಾರದೇ ಇರಲಿ, ಅದರಲ್ಲಿ ಆರ್.ವಿ. ದೇಶಪಾಂಡೆಯವರು ಇರದಿರಲು ಸಾಧ್ಯವೆ"? ಎಂಬ ಕಾಲ ಒಂದಿತ್ತು. ಅದು ಆಗಿನ ಕಥೆ ಎಂದಿದ್ದರು ಸಿದ್ಧರಾಮಯ್ಯನವರು ೨೦೨೩ ರಲ್ಲಿ. ಅದೆಲ್ಲವನ್ನು ಈಗ ಸರಿಪಡಿಸಿಕೊಂಡಿದ್ದಾರೆ. "ಈ ಸಲ ಕಪ್ ನಮ್ದೆ" ಅಂದುಕೊಂಡಿದ್ದರು ಅವರ ಹಿಂಬಾಲಕರು. ಹಾಗಿದ್ದರೆ ದೇಶಪಾಂಡೆಯವರ ಡೈನಮೈಟ್ ಟುಸ್ಸಾಗಲು ಕಾರಣವೇನು?
ಅವರು ಮುಗ್ಗರಿಸಿದ್ದು ಎಲ್ಲಿ?
ಚಿಕ್ಕೊಡಿಯಿಂದ ಆರುಬಾರಿ ಶಾಸಕ, ಸಂಸದ, ಮೆಲ್ಮನೆಯ ಸದಸ್ಯರಾದ ಪ್ರಕಾಶ ಹುಕ್ಕೇರಿ, ಮುದ್ದೇಬಿಹಾಳದಿಂದ ಆರು ಬಾರಿ ಶಾಸಕರಾದ ಸಿ.ಎಸ್. ನಾಡಗೌಡ, ಯಲಬುರ್ಗಾದಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾದ ಬಸವರಾಜ ರಾಯರೆಡ್ಡಿಗಳು ಸರಿಯಾದ ಸಮಯಕ್ಕೆ ಕಾಯುತ್ತಿದ್ದಾರೆಯೆ?
ರಾಮಕೃಷ್ಣ ಹೆಗಡೆಯವರ ನೀಲಿ ಕಣ್ಣಿನ ಹುಡುಗನೆಂದೇ ಕರೆಯಲ್ಪಟ್ಟಿದ್ದ, ೧೯೮೩ರಲ್ಲಿ ಚಿಕ್ಕವಯಸ್ಸಿನಲ್ಲಿಯೇ ಶಾಸನ ಸಭೆ ಪ್ರವೇಶಿಸಿ, ನಂತರ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ, ನಾಲ್ಕು ಬಾರಿಶಾಸಕರಾಗಿ ಆಯ್ಕೆಯಾದ ಆಳಂದದ ಬಿ.ಆರ್.ಪಾಟೀಲ ಸಿದ್ಧರಾಮಯ್ಯನವರ ಸ್ನೇಹಿತರು. ಜಾತಿಯಲ್ಲಿ ನಂಬುಗೆಯಿಲ್ಲದ ಸಿದ್ಧರಾಮಯ್ಯನವರು ಪಂಚಮಸಾಲಿ ಬಿ.ಆರ್. ಪಾಟೀಲರನ್ನು ಪರಿಗಣಿಸದೆ ಇದ್ದದ್ದೊಂದು ಸೋಜಿಗವಾಗಿತ್ತು. ಅವರು ಈ ಸಲ ಇವರನ್ನು ಕೈ ಬಿಡರು ಎಂದು ನಂಬಿದ್ದರು ಪಂಚಮಸಾಲಿಜನರು. ಆದರೆ ಮೊದಲನೆಯ ಬಸ್ಸು ತಪ್ಪಿಸಿಕೊಂಡ ಆಳಂದದ ಶಾಸಕರು ಬಂಡೆಯನ್ನು ಒಡೆಯಲು ಯಾವ ಸುತ್ತಿಗೆಗೆ ಆರ್ಡರ್ ಮಾಡಿದ್ದಾರೆ?
ನಾಲ್ಕುಬಾರಿ ವಿಧಾನಸಭೆಯ ಸದಸ್ಯ' ಒಮ್ಮೆ ಪರಿಷತ್ ಸದಸ್ಯ, ಸ್ವತಃ ಪ್ರಧಾನ ಮಂತ್ರಿಗಳ ಸಂದೇಶದಿಂದಲೇ ಡಿ. ಸಿ. ಎಂ. ಸ್ಥಾನ ಪಡೆದಿದ್ದ, ಅವರದೆ ಸಮುದಾಯದ ಲಕ್ಷ್ಮಣ ಸವಧಿಯವರನ್ನು ಕಾಂಗ್ರೆಸ್ ಪಕ್ಷ ಹೊತ್ತು ತಂದಿತ್ತು. "ಮುಂದಿನ ಸರ್ಕಾರ ನಮ್ಮದೆ, ಆ ಸರ್ಕಾರದಲ್ಲಿ ಉಪ
ಮುಖ್ಯಮಂತ್ರಿಯ ಸ್ಥಾನ ನಿಮ್ಮದೆ" ಎಂಬ ಬ್ರಮೆ ಹುಟ್ಟಿಸಿ, ಇಂದು 'ದೇಹಲಿ ಟು ಬೆಂಗಳೂರು' ಪ್ಲೈಟ್ ನಲ್ಲಿ ಕಾಲಾಹರಣ ಮಾಡುವಂತೆ ಮಾಡಿದ್ದಕ್ಕಾಗಿ ಇವರು ಯಾವ ಬಾಂಬ್ ಇಡಲಿದ್ದಾರೆ? ಮಧ್ಯ ಕರ್ನಾಟಕದ ಮೊಳಕಾಲ್ಮೂರು ಕ್ಷೇತ್ರದಿಂದ ಏಳನೆಯ ಬಾರಿ ವಿಧಾನ ಸಭೆ ಪ್ರವೇಶಿಸಿದ ಎನ್.ವೈ. ಗೋಪಾಲಕೃಷ್ಣ,ಹಾವೇರಿಯ ಬಸವರಾಜ ಶಿವಣ್ಣವರ್ ಸುಮ್ಮನೇ ಕೂಡುವರೇ?
ಇನ್ನು ತುಮಕೂರಿನ ಟಿ. ಬಿ. ಜಯಚಂದ್ರ ಇಂದು ನಿನ್ನೆ ಬಂದವರಲ್ಲ. ಏಳು ಬಾರಿ ಶಾಸಕರಾಗಿ, ಅನೇಕ ಸರ್ಕಾರಗಳಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಇವರೂ ಕೂಡ ಒಕ್ಕಲಿಗ ಸಮಾಜದವರು. ಅದೇ ಸಮಾಜದ ಮಂಡ್ಯದ ಗೌಡರೇನೂ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತ ಸುಮ್ಮನಿರುವ ಜಾಯಮಾನದವರೇ? ಅನ್ಯಾಯವಾದಾಗ ರಾಜರ ಎದುರು ಪ್ರತಿಭಟಿಸಿದ ಮೈಸೂರಿನ ಇಂದಿನ ಪ್ರತಿನಿಧಿಗಳು, ಕೊಡಗಿನ ಕಲಿಗಳ ಬತ್ತಳಿಕೆಗಳಲ್ಲಿ ಯಾವ ಯಾವ ಆಯುಧಗಳಿರಬಹುದು?
ಆದರೂ ನನಗೇನೋ ಸಮಾಧಾನವಿದೆ. ಕನಕಪುರದ ಬಂಡೆ ಇಂತಹ ಏಟುಗಳನ್ನು ತಿಂದೇ ಬದುಕಿರುವುದು. ಹೊಡೆತ ಬಿದ್ದಷ್ಟು ಗಟ್ಟಿಯಾಗುವ ಗ್ರಾನೈಟ್ ಮೇಲೆ ಯಾವುದೇ ಡೈನಮೈಟ್ ಸದ್ಯಕ್ಕೆ ವರ್ಕ್ ಆಗದು.