ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ ಹಾಗೂ ನಟ ಯಶಸ್ ಸೂರ್ಯ ಅವರಿಗೆ 59ನೇ ಸಿಸಿಹೆಚ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಪ್ರಕರಣದಲ್ಲಿ ಇಬ್ಬರೂ ಸಾಕ್ಷಿಗಳಾಗಿದ್ದು, ಕೊಲೆಗೂ ಮುನ್ನ ಆರೋಪಿ ದರ್ಶನ್ ಭಾಗಿಯಾಗಿದ್ದ ಪಾರ್ಟಿಯಲ್ಲಿ ಅವರು ಪಾಲ್ಗೊಂಡಿದ್ದರು.
ಬೆಂಗಳೂರಿನ ಸ್ಟೋನಿ ಬ್ರೂಕ್‌ನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ, ದರ್ಶನ್ ಸೇರಿದಂತೆ ಇತರರೊಂದಿಗೆ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯಲ್ಲಿ ಇಬ್ಬರ ಹೇಳಿಕೆಗಳು ಮಹತ್ವದ್ದಾಗಿರುವುದರಿಂದ, ನ್ಯಾಯಾಲಯವು ಸಾಕ್ಷ್ಯ ದಾಖಲಿಸಲು ಸಮನ್ಸ್ ನೀಡಿದೆ. ಅಕ್ಟೋಬರ್ 13ರಂದು ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷ್ಯ ನೀಡುವಂತೆ ಇಬ್ಬರು ನಟರಿಗೆ ಸೂಚಿಸಲಾಗಿದೆ. ನಟ ಚಿಕ್ಕಣ್ಣ ಅವರಿಗೆ CW-80 ಹಾಗೂ ನಟ ಯಶಸ್ ಸೂರ್ಯ ಅವರಿಗೆ CW-98 ಎಂದು ಸಮನ್ಸ್ ಜಾರಿಗೊಳಿಸಲಾಗಿದೆ.