ಮೈಸೂರು: ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿರುವ ಬೆನ್ನಲ್ಲೇ, ಉರ್ದು ಭಾಷೆಗೂ ಅಧಿಕೃತ ಭಾಷಾ ಸ್ಥಾನಮಾನ ನೀಡುವಂತೆ ಎಸ್ಡಿಪಿಐ ಆಗ್ರಹಿಸಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಕರ್ನಾಟಕದಲ್ಲಿ ಉರ್ದುವಿಗೂ ಅಧಿಕೃತ ಭಾಷೆಯ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 4,236 ಉರ್ದು ಮಾಧ್ಯಮ ಶಾಲೆಗಳಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ತೆಲಂಗಾಣ ಮಾದರಿಯಲ್ಲಿ ಉರ್ದುವಿಗೆ ಅಧಿಕೃತ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಉರ್ದುವಿಗೆ ಮಾನ್ಯತೆ ನೀಡುವುದರಿಂದ ಕನ್ನಡ ಭಾಷೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಉರ್ದುವಿನಲ್ಲೂ ಅರ್ಜಿ ಸಲ್ಲಿಸಲು ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ಉರ್ದುವಿನಲ್ಲೂ ನೀಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಇದಲ್ಲದೆ, ಉರ್ದು ಮಾಧ್ಯಮ ಶಾಲೆಗಳಲ್ಲಿನ ಖಾಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಎಸ್ಡಿಪಿಐ ಒತ್ತಾಯಿಸಿದೆ. ಸರ್ಕಾರಿ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಉರ್ದು ಭಾಷೆಯಲ್ಲೂ ಪ್ರಕಟಿಸಬೇಕು ಎಂದು ಅಬ್ದುಲ್ ಮಜೀದ್ ಪತ್ರದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.